ಬಾಗಲಕೋಟೆ: ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕೇಂದ್ರದಲ್ಲಿ ಕೊರೊನಾ ಸೋಂಕಿತರು ಕೆಲಸ ಮಾಡುವ ಬಗ್ಗೆ ಮಾಹಿತಿ ಪಡೆದು ಸುದ್ದಿ ಮಾಡಲು ಸ್ಥಳಕ್ಕೆ ತೆರಳಿದ ಮಾಧ್ಯಮದವರನ್ನು ಸ್ಥಳೀಯರು ಅವಾಚ್ಯ ಶಬ್ದದಿಂದ ನಿಂದಿಸಿ, ಹಲ್ಲೆ ಯತ್ನ ನಡೆಸಿದ್ದಾರೆ. ಈ ಘಟನೆ ಇಲಕಲ್ಲ ತಾಲೂಕಿನ ತುಂಬ ಗ್ರಾಮದ ಬಳಿ ಜರುಗಿದೆ.
ಶಾಸಕ ದೊಡ್ಡನಗೌಡ ಪಾಟೀಲ ಕುಮ್ಮಕ್ಕಿನಿಂದಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಲ್ಲಿ ಕೊರೊನಾ ಸೋಂಕಿತರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾಧ್ಯಮವರನ್ನು ಘಟನಾ ಸ್ಥಳಕ್ಕೆ ಕರೆಸಿದ್ದರು. ಈ ಸಂದರ್ಭದಲ್ಲಿ ಜಮೀನಿಗೆ ಸಂಬಂಧಪಟ್ಟವರು ಹಾಗೂ ಸ್ಥಳೀಯರು ಮಾಧ್ಯಮದವರನ್ನು ತಡೆದಿದ್ದಾರೆ. ಖಾಸಗಿ ಜಮೀನಿಗೆ ಬರಲು ಯಾರಿಂದ ಅನುಮತಿ ಪಡೆದುಕೊಂಡಿರಿ? ಎಂದು ಪ್ರಶ್ನಿಸಿದರು.
ಇಷ್ಟಕ್ಕೆ ಸುಮ್ಮನಾಗದ ಸ್ಥಳೀಯರು ಮಾಧ್ಯಮದವರು ತೆಗದುಕೊಂಡು ಹೋಗಿದ್ದ ವಾಹನವನ್ನು ಅಡ್ಡಗಟ್ಟಿ ಅವಾಚ್ಯ ಶಬ್ದದಿಂದ ನಿಂದಿಸಿದರು. ಈ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪನವರ ಹಾಗೂ ಸ್ಥಳೀಯ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಘಟನೆ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.