ಬಾಗಲಕೋಟೆ: ನಗರದ ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ವೈದ್ಯರು ಮೃತದೇಹದ ಅಂಗಾಂಗ ಸಂರಕ್ಷಣೆ ಮಾಡಿ ಮೆದುಳಿನಲ್ಲಿ ಕೃತಕ ದ್ರವ ಸಂಚಾರ ಸೃಷ್ಟಿಸುವ ಸಂಶೋಧನೆ ಮೂಲಕ ಗಮನ ಸೆಳೆದಿದ್ದಾರೆ.
ಮನುಷ್ಯನ ಮೆದುಳಿನ ಒಳಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಸಿ.ಎಸ್.ಎಫ್ ಎನ್ನುವ ನೀರಿನಂತಹ ಒಂದು ದ್ರವ ಇರುತ್ತದೆ. ಇದು ಮೆದುಳನ್ನು ಸಂರಕ್ಷಿಸುತ್ತದೆ. ಕೆಲಮೊಮ್ಮೆ ಈ ದ್ರವದ ಮೂಲಕ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆದರೆ ಮೃತ ಶರೀರದಲ್ಲಿ ಸಿ ಎಸ್ ಎಫ್ ದ್ರವದ ಸಂಚಾರ ಇರುವುದಿಲ್ಲ. ಹೀಗಾಗಿ ಈ ರೀತಿಯ ಮೆದುಳು ಶಸ್ತ್ರ ಚಿಕಿತ್ಸೆ ತರಬೇತಿಯನ್ನು ನೀಡುವುದು ಸಾಧ್ಯವಾಗುವುದಿಲ್ಲ.
ಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಅಂಗ ರಚನಾ ಶಾಸ್ತ್ರ ವಿಭಾಗದಲ್ಲಿ ಅಲ್ಲಿನ ಬೋಧಕ ಸಿಬ್ಬಂದಿ ಮತ್ತು ಡಾ. ಅಜಯ್ ಹೆರೂರು ಅವರು ಜೊತೆಗೂಡಿ ಸಂಶೋಧನೆ ಮೂಲಕ ಮೃತ ಶರೀರದ ಮೆದುಳಿನಲ್ಲಿ ಕೃತಕ ದ್ರವವನ್ನು ಸಂಚರಿಸುವಂತೆ ಮಾಡಿ ಮೃತದೇಹದ ಮೆದುಳಿನ ಶಸ್ತ್ರ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಶರೀರದ ಮೆದುಳು ಶಸ್ತ್ರ ಚಿಕಿತ್ಸಾ ಕಾರ್ಯಾಗಾರವನ್ನು ಆಯೋಜಿಸಿ ದೇಶದ ವಿವಿಧ ಭಾಗಗಳ ನರಶಾಸ್ತ್ರ ಚಿಕಿತ್ಸಕರಿಗೆ ತರಬೇತಿ ನೀಡಲಾಯಿತು. ಮೃತದೇಹದ ಮೆದುಳಿನ ಕೃತಕ ದ್ರವ ಸಂಚಾರ ಮಾಡುವ ಇಂತಹ ಸಂಶೋಧನೆ ಭಾರತದಲ್ಲಿಯೇ ಪ್ರಥಮವಾಗಿದ್ದರೆ, ಜಗತ್ತಿನಲ್ಲಿ ಎರಡನೇ ಸಂಶೋಧನೆ ಎಂಬುದು ಗಮನಾರ್ಹವಾಗಿದೆ.
ಅಂಗರಚನಾ ಶಾಸ್ತ್ರ ಮುಖ್ಯಸ್ಥರಾದ ಡಾ.ಸಂಜೀವ ಕೊಳಗಿ ಅವರ ನೇತೃತ್ವದಲ್ಲಿ ಸಂಶೋಧನೆ ನಡೆದಿರುವುದು ಯಶಸ್ಸು ಕಂಡಿದೆ. ಇಂತಹ ಮೆದುಳು ಶಸ್ತ್ರ ಚಿಕಿತ್ಸೆ ಬಗ್ಗೆ ಹಿಂದೆಯೇ ಚಲನಚಿತ್ರ ಕಥೆಯಾಗಿ ಮೂಡಿರುವುದು ಈಗ ನಿಜವಾಗುವ ಕಾಲ ಸಮೀಪಿಸಿದೆ.
ಮೊಟ್ಟ ಮೊದಲು ಶಂಕರನಾಗ್ ಮತ್ತು ಮಂಜುಳಾ ನಟಿಸಿದ 'ಸೀತಾರಾಮು' ಚಿತ್ರದ ಕಥೆಯಲ್ಲಿ ನಾಯಕ-ನಾಯಕಿ ಪ್ರೀತಿಸುವ ಯುವಜೋಡಿಯೊಂದು ಮದುವೆಯಾಗಲು ನಿರ್ಧರಿಸುತ್ತಾರೆ. ಆದರೆ ಆ ಹೊತ್ತಿಗೆ ಹುಡುಗನ ಕೊಲೆಯಾಗುತ್ತದೆ. ಹುಡುಗಿಗೆ ಹುಚ್ಚು ಹಿಡಿಯುತ್ತದೆ. ಆಗ ಹುಡುಗನ ವೈದ್ಯ ಗೆಳೆಯನೊಬ್ಬ ಕೊಲೆಗೀಡಾದ ತನ್ನ ಸ್ನೇಹಿತನ ಮೆದುಳನ್ನು ಹುಡುಗಿಗೆ ಕಸಿ ಮಾಡಿಸುತ್ತಾನೆ. ಹುಡುಗಿಯ ರೂಪದಲ್ಲಿ ಮೃತ ನಾಯಕ ತನ್ನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ.
1979ರಲ್ಲಿ ಅಂದರೆ ಇಂದಿಗೆ ಸರಿಯಾಗಿ 42 ವರ್ಷಗಳ ಹಿಂದೆ ತೆರೆ ಕಂಡು ಸೂಪರ್ ಹಿಟ್ ಆದ ಸಿನಿಮಾ 'ಸೀತಾರಾಮು ಚಿತ್ರ. ಇಲ್ಲಿನ ವೈದ್ಯರು ಮಾಡಿರುವ ಸಂಶೋಧನೆಗೆ ತಾಳೆ ಹಾಕುವಂತಾಗಿದೆ. ಬಾಗಲಕೋಟೆಯ ಎಸ್ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ನಡೆದ ಪವಾಡ ಸದೃಶ್ಯ ಆಪರೇಷನ್ ಡಾ. ಸಂಜೀವ ಕೊಳಗಿ ಮತ್ತು ಡಾ. ಅಜಯ್ ಹೇರೂರ ತಂಡದ ಸಾಹಸದ ಕಥೆಯಿದು.
ಮೃತ ವ್ಯಕ್ತಿಯ ಮೆದುಳನ್ನು ಕೃತಕವಾಗಿ ಸಕ್ರಿಯಗೊಳಿಸಿ ಪ್ರಾಯೋಗಿಕ ಕಲಿಕೆಗೆ ಬಳಸುವ ಪ್ರಯೋಗವಿದು. ಇದು ಇಡೀ ದೇಶದಲ್ಲೇ ಪ್ರಥಮ ಎಂದು ಹೇಳಲಾಗ್ತಿದೆ.