ಬಾಗಲಕೋಟೆ: ಚಿನ್ನಾಭರಣ ಸೇರಿದಂತೆ ಲಕ್ಷಾಂತರ ರೂಪಾಯಿಗಳಷ್ಟು ನಗದು ಹಣ ದೋಚಿಕೊಂಡು ಪರಾರಿಯಾಗಿದ್ದ ಕಳ್ಳರನ್ನು ಹಿಡಿಯುವಲ್ಲಿ ಮುಧೋಳ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ತಿಂಗಳು ಮೇ 25ರಂದು ಲೋಕಾಪೂರ ಪಟ್ಟಣದಲ್ಲಿ ಇರುವ ಶ್ರೀನಿವಾಸ ಹನಮಂತಗೌಡ ನಿಂಗನೂರು ಎಂಬುವ ಮನೆಗೆ ಮಧ್ಯೆ ರಾತ್ರಿ ನುಗ್ಗಿ ಲಾಕರ್ನಲ್ಲಿ ಇದ್ದ 12.25 ಲಕ್ಷ ಮೌಲ್ಯದ 250 ಗ್ರಾಂ ಚಿನ್ನಾಭರಣ ಹಾಗೂ 1.26 ಲಕ್ಷ ಮೌಲ್ಯದ 1810 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು 2.27 ಲಕ್ಷ ನಗದು ಹಣ ಹೀಗೆ ಒಟ್ಟು 15,78,700 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದರು.
ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಪಿಐ ಎಚ್ ಆರ್ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಒಂದು ತಿಂಗಳೊಳಗೆ ಕಳ್ಳತನ ಪ್ರಕರಣ ಭೇದಿಸಿ, ಮೂವರು ಕಳ್ಳರನ್ನು ಬಂಧನ ಮಾಡಿದ್ದಾರೆ.
ಮುಧೋಳ ತಾಲೂಕಿನ ಮಳಲಿ ಗ್ರಾಮದ ಸಿದ್ದಪ್ಪ ಹಾದಿಮನಿ, ಕಲ್ಮೇಶ ರಾನವ್ವಗೋಳ ಹಾಗೂ ಮುತ್ತಪ್ಪ ಪೂಜಾರಿ ಎಂಬುವವರನ್ನು ಪೊಲೀಸರು ಬಂಧಿಸಿ, ಕಳ್ಳತನ ಮಾಡಿಕೊಂಡು ಹೋಗಿದ್ದ ಚಿನ್ನಾಭರಣ ಹಾಗೂ ಒಂದು ಬೈಕ್ ಜಪ್ತಿ ಮಾಡಿದ್ದಾರೆ. ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿ, ಬಹುಮಾನ ಘೋಷಣೆ ಮಾಡಿದ್ದಾರೆ.