ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಮತ್ತೆ ಹೆಚ್ಚಾಗುತ್ತಿರುವ ಪರಿಣಾಮ ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭಾ ನದಿ ಪಾತ್ರಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಹಿಡಕಲ್ ಜಲಾಶಯದಿಂದ ಸಾಕಷ್ಟು ಪ್ರಮಾಣದಲ್ಲಿ ಘಟಪ್ರಭಾ ನದಿಗೆ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಮಧೋಳ ತಾಲೂಕಿನಲ್ಲಿ ಜನ ಮತ್ತೆ ಪ್ರವಾಹ ಭೀತಿಯಲ್ಲಿದ್ದಾರೆ. ಜೊತೆಗೆ ಒಂಡಿಗೋಡಿ, ಮಿರ್ಜಿ, ರೋಗಿ, ಮಾಚಕನೂರು ಸೇರಿದಂತೆ ಇತರ ಗ್ರಾಮಗಳಲ್ಲೂ ನೆರೆ ಹಾವಳಿಯಾಗುವ ಸಂಭವ ಹೆಚ್ಚಿದೆ.
ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿಯ ಅಬ್ಬರ ಹೆಚ್ಚಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಶೂರ್ಪಾಲಿ, ಮುತ್ತೂರು, ಮೈಗೂರು, ಕೊಂಕಣವಾಡಿ, ತುಬಚಿ ಸೇರಿದಂತೆ ಇತರ ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಅಧಿಕಾರಿಗಳು ಈಗಾಗಲೇ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಂಡಿದ್ದು, ಸಂತ್ರಸ್ತರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಿಳಿಸಲಾಗಿದೆ ಎಂದು ತಹಶೀಲ್ದಾರ್ ಸಂಜಯ್ ಇಂಗಳೆ ಹೇಳಿದ್ದಾರೆ.