ಬಾಗಲಕೋಟೆ: ಪಟಾಕಿಗಳ ಜಾತ್ರೆ ಎಂದು ಹೆಸರು ವಾಸಿಯಾಗಿರುವ ರಬಕವಿ ಬನಹಟ್ಟಿ ಕಾಡಸಿದ್ದೇಶ್ವರ ಜಾತ್ರೆ ಅದ್ಧೂರಿಯಾಗಿ ನೆರವೇರಿತು. ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಸಿಡಿಸಿ, ಭಕ್ತರು ತಮ್ಮ ಹರಕೆ ತೀರಿಸುವುದು ಇಲ್ಲಿಯ ವಿಶೇಷ.
ಬನಹಟ್ಟಿ ಪಟ್ಟಣದಲ್ಲಿ ಶ್ರೀ ಕಾಡಸಿದ್ಧೇಶ್ವರ ದೇವರ ರಥೋತ್ಸವ ಇರುವ ಹಿನ್ನೆಲೆ, ಸಂಜೆ 4 ಗಂಟೆಯಿಂದ 10 ಗಂಟೆವರೆಗೆ ಇಡೀ ರಸ್ತೆ ತುಂಬೆಲ್ಲಾ ಪಟಾಕಿಗಳ ಸದ್ದು ಕೇಳಿಸುತ್ತಿರುತ್ತದೆ. ಕೋವಿಡ್‌ನಿಂದಾಗಿ ಎರಡು ವರ್ಷ ರಥೋತ್ಸವಕ್ಕೆ ನಿಷೇಧ ಹೇರಲಾಗಿತ್ತು. ಪ್ರತಿ ವರ್ಷ ಜಾತ್ರಾ ಮಹೋತ್ಸವ ನಿಮಿತ್ತ ಪರಂಪರೆಯಂತೆ ಬಾನಂಗಳಕ್ಕೆ ಚಿಮ್ಮಿದ ಪಟಾಕಿಗಳು ಚಿತ್ತಾರ ಮೂಡಿಸಿ ರಂಜಿಸಿದವು. ಆರಾಧ್ಯ ದೈವ ಶ್ರೀ ಕಾಡಸಿದ್ಧೇಶ್ವರ ರಥೋತ್ಸವ ಕಾರ್ಯಕ್ರಮವು ರಾತ್ರಿಯವರೆಗೆ ಜರುಗುತ್ತದೆ.
ಕಾಡ ಸಿದ್ದೇಶ್ವರ ದೇವರಿಗೆ ಭಕ್ತರು ತಮ್ಮ ಬೇಡಿಕೆಯನ್ನು ಪೂರೈಸಿದರೆ, ಜಾತ್ರೆಯಲ್ಲಿ ಪಟಾಕಿ ಹೊಡೆಯುವುದಾಗಿ ಬೇಡಿಕೊಂಡಿರುತ್ತಾರೆ. ಈ ಹಿನ್ನೆಲೆ ಬಂದ ಭಕ್ತರು ನೂರು ರೂಪಾಯಿಗಳಿಂದ ಹಿಡಿದು ಸಾವಿರಾರು ರೂಪಾಯಿಗಳ ವರೆಗೆ ಪಟಾಕಿ ಹೊಯುತ್ತಾರೆ. ಜಾತ್ರೆ ಅಂಗವಾಗಿ ಬೆಳಗಿನ ಜಾವದಿಂದಲೇ ದೇವರಿಗೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಗುತ್ತದೆ.
ಇದನ್ನೂ ಓದಿ: ಬೆಳಗಾವಿ ನಗರದ 'ತವರು ಮನೆಯ ದೇವತೆ' ಜಾತ್ರೆಗೆ ಅದ್ಧೂರಿ ಚಾಲನೆ
ಸಂಜೆ 4 ಗಂಟೆಗೆ ರಥೋತ್ಸವ ಪ್ರಾರಂಭ ಆಗುತ್ತಿದ್ದಂತೆ ಪಟಾಕಿ ಸಿಡಿಸುವುದು ಆರಂಭವಾಗಿದೆ. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದುಕೊಂಡರು.