ಬಾಗಲಕೋಟೆ : ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಾದಾಮಿ ಬನಶಂಕರಿ ದೇವಾಲಯದ ಜಾತ್ರಾ ಮಾಹೋತ್ಸವ ಜನವರಿಯಲ್ಲಿ ನಡೆಯಬೇಕಿದ್ದು, ಅದನ್ನು ನಿಷೇಧಿಸಲಾಗಿದೆ. ಇದರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಕಳೆದ ಹತ್ತು ತಿಂಗಳಿನಿಂದ ಕೊರೊನಾ ಮಾರಿ ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆ ಮುಂದಿನ ತಿಂಗಳು ನಡೆಯಬೇಕಿದ್ದ ಜಾತ್ರಾ ಮಹೋತ್ಸವಗಳನ್ನು ರದ್ದು ಮಾಡಲಾಗಿದೆ. ಅದರಂತೆ ಬಾಗಲಕೋಟೆಯ ಬನಶಂಕರಿ ದೇವಾಲಯದಲ್ಲಿ ನಡೆಯಬೇಕಿದ್ದ ಮಹೋತ್ಸವಕ್ಕೆ ನಿಷೇಧ ಹೇರಲಾಗಿದೆ. ಇಲ್ಲಿಗೆ ಬರುತ್ತಿದ್ದ ಭಕ್ತರು ಮತ್ತು ಪ್ರವಾಸಿಗರನ್ನು ನಂಬಿಕೊಂಡಿದ್ದ ವ್ಯಾಪಾಸ್ಥರು ಸಂಕಷ್ಟಕ್ಕೆ ಸಿಲಿಕಿದ್ದಾರೆ.
ಪ್ರತಿವರ್ಷ ನಡೆಯುತ್ತಿದ್ದ ಬನಶಂಕರಿ ಜಾತ್ರಾ ಮಹೋತ್ಸವಕ್ಕೆ ಮಹಾರಾಷ್ಟ್ರ, ಗೋವಾ,ಆಂಧ್ರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರು. ದೇವಿಗೆ ವಿವಿಧ ಪೂಜೆ ಹಾಗೂ ಸೇವೆಗಳನ್ನ ಸಲ್ಲಿಸುತ್ತಿದ್ದರು. ಇದರಿಂದ ದೇವಸ್ಥಾನ ಟ್ರಸ್ಟ್ಗೆ ಕೋಟ್ಯಂತರ ರೂ. ಆದಾಯ ಹರಿದು ಬರುತ್ತಿತ್ತು.
ಜಾತ್ರೆಯ ಸಮಯದಲ್ಲಿ ಮನೋರಂಜನೆಗೆಗಾಗಿ ನಾಟಕಗಳ ಪ್ರದರ್ಶನ ನಡೆಯುತ್ತಿದ್ದವು. ಆದರೆ, ಈ ಬಾರಿ ನಾಟಕ ಕಲಾವಿದರು ಸೇರಿ ಜಾತ್ರೆಯಲ್ಲಿ ವ್ಯಾಪಾರಕ್ಕೆಂದು ಬರುತ್ತಿದ್ದ ಸಣ್ಣ ಸಣ್ಣ ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದಾರೆ.
ಕೊರೊನಾ ಭೀತಿಯಿಂದ ದೇವಾಲಯದಲ್ಲಿ ಸಾರ್ವಜನಿಕವಾಗಿ ನಡೆಯುತ್ತಿದ್ದ ಪೂಜೆ ಕಡಿಮೆ ಮಾಡಲಾಗಿದೆ. ಸಾಮಾಜಿಕ ಅಂತರದಿಂದ ದರ್ಶನ ಭಾಗ್ಯ ಇದ್ದರೂ ಸಹ ಇತರ ಸೇವೆಗಳು ಬಂದ್ ಮಾಡಲಾಗಿದೆ. ಅನ್ನಪ್ರಸ್ಥ, ಅಭಿಷೇಕಗಳಂತಹ ಸೇವೆ ಸ್ಥಗಿತಗೊಳಿಸಲಾಗಿದೆ. ಈಗ ಮತ್ತೆ ಕೊರೊನಾ ಭೀತಿಯಿಂದ ಜಾತ್ರೆ ನಿಷೇಧ ಮಾಡಿದ್ದರಿಂದ ಮತ್ತಷ್ಟು ನಷ್ಟ ಉಂಟಾಗಲಿದೆ.