ಬಾಗಲಕೋಟೆ: ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ರಬಕವಿ-ಬನಹಟ್ಟಿ ಇನ್ನೂ ನಿರೀಕ್ಷಿಸಿದಷ್ಟು ಅಭಿವೃದ್ಧಿಯಾಗಿಲ್ಲ. ಅದರಲ್ಲೂ ಬನಹಟ್ಟಿ ಬಸ್ ನಿಲ್ದಾಣವಂತೂ ಸಮಸ್ಯೆಗಳ ಆಗರದಿಂದ ಕೂಡಿದೆ. ಕಳೆದೆರಡು ತಿಂಗಳಿಂದ ಶೌಚಾಲಯ ನಿರ್ವಹಣೆಯಾಗದೆ ಸಂಪೂರ್ಣ ಹಾಳಾಗಿದೆ.
ಬಸ್ ನಿಲ್ದಾಣದ ಆವರಣದಲ್ಲಿ ನಿತ್ಯ ಸ್ವಚ್ಛತೆಯಾಗದೆ ಕಸ ಎಲ್ಲೆಂದರಲ್ಲಿ ಬಿದ್ದಿದ್ದು, ಪ್ಲಾಸ್ಟಿಕ್‍ಗಳ ಗಲೀಜಿನಿಂದ ತುಂಬಿ ತುಳುಕುತ್ತಿದೆ. ರಾತ್ರಿಯಾಗುತ್ತಿದ್ದಂತೆ ವಿದ್ಯುತ್ ದೀಪಗಳು ಉರಿಯದೆ ಬಸ್ ನಿಲ್ದಾಣ ಸಂಪೂರ್ಣ ಕತ್ತಲಲ್ಲೇ ಇರುತ್ತದೆ. ಇಲ್ಲಿಯೇ ಇರುವ ಹೋಟೆಲ್‍ನ ನೀರು ರಸ್ತೆಯ ಮೇಲೆಯೇ ಹರಿದು, ಜನ ಇದೇ ಕೊಳಚೆ ನೀರಿನಲ್ಲಿ ಸಂಚರಿಸಬೇಕಾಗಿದೆ.
ಪ್ರಮುಖವಾಗಿ ಈಗಷ್ಟೇ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕ್ತಿದ್ದಾರೆ. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ಮೇಲೆ ಶೀಘ್ರ ಕ್ರಮ ಜರುಗಿಸಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.
ನಿತ್ಯ ಇಬ್ಬರು ಸರದಿಯಂತೆ ಸಾರಿಗೆ ನಿಯಂತ್ರಕರಾಗಿ ಸೇವೆ ಸಲ್ಲಿಸುವ ಬಸ್ ನಿಲ್ದಾಣದಲ್ಲಿ ಸಾರಿಗೆ ನಿಯಂತ್ರಕರಿಲ್ಲದೆ ಪ್ರಯಾಣಿಕರಿಗೆ ಮಾಹಿತಿ ನೀಡುವವರೂ ಇಲ್ಲ. ಇವೆಲ್ಲದರ ಕುರಿತು ಕೂಡಲೇ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆಗಳ ಆಗರವಾಗಿರುವ ಬಸ್ ನಿಲ್ದಾಣವನ್ನು ಕೂಡಲೇ ಮೇಲ್ದರ್ಜೆಗೇರಿಸಬೇಕೆಂದು ಸ್ಥಳೀಯ ಸಂಘಟನೆಗಳು ಒತ್ತಾಯಿಸಿವೆ.