ಬಾಗಲಕೋಟೆ: ಮನೆಗೆ ಆಧಾರವಾಗಿದ್ದ ಯಜಮಾನನಿಗೆ ಕಿಡ್ನಿ ಸಮಸ್ಯೆ ಎದುರಾಗಿ ಇಡೀ ಕುಟುಂಬವೀಗ ಸಹಾಯಕ್ಕಾಗಿ ಅಂಗಲಾಚುತ್ತಿದೆ. ಜಿಲ್ಲೆಯ ಜಮಖಂಡಿ ತಾಲೂಕಿನ ಕನ್ನೋಳ್ಳಿ ಗ್ರಾಮದ ನಿವಾಸಿಗಳಾದ ಗುರುಪಾದ ಹರಿಜನ ಹಾಗೂ ಸುರೇಖಾ ಹರಿಜನ ದಂಪತಿ ಈಗ ದಿಕ್ಕು ತೋಚದೇ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಕೂಲಿ ಮಾಡಿ ಇಡೀ ಕುಟುಂಬ ನೋಡಿಕೊಳ್ಳುತ್ತಿದ್ದ ಗುರುಪಾದ ಹರಿಜನ ತೀವ್ರ ಹೊಟ್ಟೆ ನೋವಿನ ಕಾರಣ ಆಸ್ಪತ್ರೆಗೆ ತೆರಳಿದ್ದ ವೇಳೆ ಎರಡೂ ಕಿಡ್ನಿಯಲ್ಲಿ ಸಮಸ್ಯೆ ಇರುವುದು ತಿಳಿದುಬಂದಿದೆ. ಈ ಸುದ್ದಿ ತಿಳಿದು ಇಡೀ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಇಬ್ಬರು ಹೆಣ್ಣು ಮಕ್ಕಳ ಹೊಂದಿರುವ ದಂಪತಿ ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುವಂತೆ ವೈದ್ಯರು ತಿಳಿಸಿದ್ದಾರೆ.
ಆದರೆ, ಕಡು ಬಡವರಾಗಿರುವ ಇವರು ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುವುದಿರಲಿ, ನಗರಕ್ಕೆ ತೆರಳಲು ಸಹ ಹಣವಿಲ್ಲದೇ ಪರದಾಡುತ್ತಿದೆ. ಇತ್ತ ಮನೆ ನೋಡಿಕೊಳ್ಳಲು ಗುರುಪಾದನ ಪತ್ನಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದು, ಮನೆ ನಿರ್ವಹಣೆಯೇ ಕಷ್ಟವಾಗಿದೆ.
25 ವರ್ಷದ ಹಿಂದೆ ಗ್ರಾಮಪಂಚಾಯಿತಿ ನಿರ್ಮಿಸಿಕೊಟ್ಟ ಚಿಕ್ಕದಾದ ಮನೆಯಲ್ಲಿ ವಾಸವಿರುವ ಕುಟುಂಬ ಕಿಡ್ನಿ ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಕಣ್ಣೀರಿಡುತ್ತಿದೆ. ಜೊತೆಗೆ ಸ್ಥಳೀಯ ರಾಜಕೀಯ ನಾಯಕರು, ಶಾಸಕರು, ಸಂಘ - ಸಂಸ್ಥೆಗಳ ನೆರವಿಗಾಗಿ ಕಾದಿದ್ದಾರೆ.
ಇದನ್ನೂ ಓದಿ: ಬಿಟ್ ಕಾಯಿನ್ ದಂಧೆಯಲ್ಲಿ ಪ್ರಭಾವಿಗಳಿದ್ದಾರೆ, ಸೂಕ್ತ ತನಿಖೆಯಾಗಲಿ: ಸಿದ್ದರಾಮಯ್ಯ ಆಗ್ರಹ