ಬಾಗಲಕೋಟೆ: ಪೊಲೀಸ್ ಇಲಾಖೆಯ ಕೆಲಸದ ವೇಳೆ ಬೇರೆ ಕೆಲಸಕ್ಕೆ ಸಮಯ ಸಿಗುವುದೇ ಅಪರೂಪ ಎನ್ನುವರೇ ಹೆಚ್ಚು. ಆದರೆ ಇಲ್ಲೊಬ್ಬರು ಪೊಲೀಸ್ ಸಿಬ್ಬಂದಿ ಬಿಡುವು ಮಾಡಿಕೊಂಡು ಮನೆಯ ಟೆರೇಸ್ ಮೇಲೂ ಬಗೆಬಗೆ ತರಕಾರಿ ಬೆಳೆದು ಗಮನ ಸೆಳೆದಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಗಮೇಶ್ ತೆಲಗಾಣಿ ಬಾಗಲಕೋಟೆ ಹೂರವಲಯದಲ್ಲಿರುವ ಪದ್ಮನಯನ ನಗರದಲ್ಲಿ ವಾಸವಿದ್ದಾರೆ. ಇವರು ಮನೆಯ ಸುತ್ತಮುತ್ತ ಲಭ್ಯವಿರುವ ಸ್ವಲ್ಪ ಪ್ರಮಾಣದ ಜಾಗ ಸೇರಿದಂತೆ ಮನೆಯ ಟೆರೇಸ್‌ನಲ್ಲೂ ತರಕಾರಿ, ಹಣ್ಣು ಬೆಳೆಯುತ್ತಿದ್ದಾರೆ.
ವೃದ್ಧಾಶ್ರಮಕ್ಕೆ ಉಚಿತ ತರಕಾರಿ ನೆರವು
ಸಂಗಮೇಶ್ 28 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದಾರೆ. ಇವರು ತಮ್ಮ ಮನೆಗೆ ಬೇಕಾದ ತರಕಾರಿ ಹೊರತುಪಡಿಸಿ, ಹೆಚ್ಚುವರಿಯಾಗಿ ಬೆಳೆದ ತರಕಾರಿಯನ್ನು ಪಕ್ಕದ ವೃದ್ಧಾಶ್ರಮಕ್ಕೆ ಉಚಿತವಾಗಿ ನೀಡುತ್ತಿದ್ದಾರೆ.
ಬದನೆಕಾಯಿ, ಮೆಣಸಿನಕಾಯಿ, ಟೊಮಾಟೋ, ಕರಿಬೇವು, ಮೂಲಂಗಿ, ಪಾಲಕ್ ಬೆಳೆ ಬೆಳೆದಿದ್ದಾರೆ. ಜೊತೆಗೆ ಮಾವು, ಪೇರಲೆ, ಪಪ್ಪಾಯಿ ಗಿಡ ನೆಟ್ಟಿದ್ದಾರೆ. ಇದರ ಜೊತೆಗೆ ಡ್ರ್ಯಾಗನ್ ಹಣ್ಣು ಸಹ ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಶಾಲಾ-ಕಾಲೇಜುಗಳು ಬಂದ್ ಆಗಿದ್ದ ಕಾರಣ ಮಕ್ಕಳು ಸಹ ಇವರಿಗೆ ಸಾಥ್ ನೀಡಿದ್ದಾರೆ. ಸಾವಯವ ಗೊಬ್ಬರ ಹಾಗೂ ಕಪ್ಪು ಮಣ್ಣು ಬಳಸಿ ಮನೆಯ ಆವರಣವನ್ನೇ ತೋಟವನ್ನಾಗಿ ಮಾರ್ಪಡಿಸಿದ್ದಾರೆ.