ಬಾಗಲಕೋಟೆ: ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಶಕ್ತಿ ವೃದ್ಧಿಸಿಕೊಳ್ಳಬಹುದಾಗಿದೆ ಎಂದು ಶಾಸಕ ಚರಂತಿಮಠ ಹೇಳಿದ್ರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಕ್ರೀಡೆಯಲ್ಲಿ ಭಾಗವಹಿಸುವ ಸ್ಪರ್ಧಿಗಳಲ್ಲಿ ಚೈತನ್ಯ ತುಂಬಿರಬೇಕು. ಅಂದಾಗ ನಮ್ಮ ಮಕ್ಕಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು, ಖ್ಯಾತಿ ಗಳಿಸಲು ಸಾಧ್ಯ. ಇಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚು ಮಹತ್ವ ದೊರೆತಿದ್ದು, ನಮ್ಮ ಕ್ರೀಡಾಪಟುಗಳು ದೇಶ ವಿದೇಶಗಳಲ್ಲಿ ಪ್ರಶಸ್ತಿ ತರುವದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬೆಳ್ಳಿಯ ಹಾಗೂ ಬಂಗಾರದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಯುವಕರು ಹಾಗೂ ಯುವತಿಯರು ಕ್ರೀಡೆಗಳಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದರು.
ಮುಖ್ಯ ಅಥಿತಿಗಳಾದ ಪಾಲ್ಗೊಂಡ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ್ ಮಾತನಾಡಿ, ಕಲಿಕೆಯ ಜೊತೆಗೆ ಇಂತಹ ಕ್ರೀಡಾ ಚಟುವಟಿಗಳಲ್ಲಿ ಪಾಲ್ಗೊಳ್ಳಬೇಕು. ಮಕ್ಕಳು ದೇಶದ ಸಂಪತ್ತು. ಕ್ರೀಡೆಯಲ್ಲಿ ನಮ್ಮ ದೇಶ ಹೊಸ ಇತಿಹಾಸ ಬರೆಯುತ್ತಿದೆ. ಕ್ರೀಡೆ ಎಂಬುದು ಭಾವೈಕ್ಯತೆಯ ಸಂಗಮವಾಗಿದ್ದು, ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಿದರೆ ದೇಶದ ಆಸ್ತಿಯಾಗಲು ಸಾಧ್ಯ ಎಂದರು.