ಬಾಗಲಕೋಟೆ: ನಗರದಲ್ಲಿರುವ ಸರ್ಕಾರಿ ಹಳೇ ಕಟ್ಟಡಗಳನ್ನು ಪುನರ್ ನವೀಕರಣ ಮತ್ತು ಸ್ವಚ್ಛತೆ ಕೈಗೊಳ್ಳುವ ದೃಷ್ಟಿಯಿಂದ ಶಾಸಕ ವೀರಣ್ಣ ಚರಂತಿಮಠ ನಗರದಲ್ಲಿ ಸಂಚಾರ ನಡೆಸಿದರು.
ಹಳೇ ಬಾಗಲಕೋಟೆಯಲ್ಲಿರುವ ತಹಶೀಲ್ದಾರ್ ಕಚೇರಿ ಆವರಣ, ತಾಲೂಕು ಪಂಚಾಯ್ತಿ ಕಟ್ಟಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಕಟ್ಟಡ ಹಾಗೂ ಆವರಣಕ್ಕೆ ಭೇಟಿ ನೀಡಿದ ಶಾಸಕ ಚರಂತಿಮಠ, ಅಲ್ಲಿಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರಿ ಜಾಗದಲ್ಲಾದರೂ ಸಿಬ್ಬಂದಿ ಸ್ವಚ್ಛತೆ ಇಟ್ಟುಕೊಳ್ಳತ್ತಿಲ್ಲ. ಹೀಗಾದರೆ ಕಟ್ಟಡಗಳ ನಿರ್ವಹಣೆ ಹೇಗೆ ಸಾಧ್ಯ, ಸ್ವಚ್ಛತೆ ಎಲ್ಲಿಂದ ಆಗಬೇಕು? ಮೊದಲು ಕಚೇರಿ ಆವರಣ ಹಾಗೂ ಕಟ್ಟಡಗಳನ್ನು ಸುಸ್ತಿಯಲ್ಲಿಡಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹಳೇ ತಹಶೀಲ್ದಾರ್ ಕಾರ್ಯಾಲಯ, ತಾಲೂಕು ಪಂಚಾಯಿತಿ ಕಟ್ಟಡಗಳು ಜಂಗಲ್ ಆದಂತೆ ಕಾಣುತ್ತಿವೆ. ಇವುಗಳನ್ನು ತಕ್ಷಣ ಶುಚಿಗೊಳಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಲ್ಲಿರುವ ಕಟ್ಟಡಗಳಲ್ಲಿ ಕಿಟಕಿ, ಬಾಗಿಲು ಮುರಿದು ಹೋಗಿದ್ದನ್ನು ಕಂಡು ಹಳೆಯದೆಲ್ಲವನ್ನು ತೆಗೆದು ಹೊಸ ಕಿಟಕಿ, ಬಾಗಿಲುಗಳನ್ನು ಹಾಕಿ ಸುಸ್ಥಿತಿಯಲ್ಲಿ ಸರ್ಕಾರಿ ಕಚೇರಿಗಳು ಕಾಣುವಂತೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದರು.
ಸರ್ಕಾರಿ ಕಟ್ಟಡಗಳಲ್ಲಿ ಖಾಸಗಿಯವರಿಗೆ ಬಾಡಿಗೆ ನೀಡಿ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಮಾಡುವುದನ್ನು ತಪ್ಪಿಸಬೇಕು. ತಕ್ಷಣವೇ ಎಲ್ಲೆಲ್ಲಿ ಸರ್ಕಾರಿ ಜಾಗ, ಕಟ್ಟಡಗಳನ್ನು ಖಾಸಗಿಯವರಿಗೆ ಬಾಡಿಗೆ ರೂಪದಲ್ಲಿ ನೀಡಲಾಗಿದೆಯೋ ಅವೆಲ್ಲಾವನ್ನೂ ವಶಕ್ಕೆ ತೆಗೆದುಕೊಂಡು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಕಚೇರಿಗಳನ್ನು ನಗರದಲ್ಲಿ ಹಳೇ ಕಟ್ಟಡಗಳಿಗೆ ಸ್ಥಳಾಂತರಿಸಬೇಕು. ಎಷ್ಟು ಸರ್ಕಾರಿ ಜಾಗ, ಕಟ್ಟಡಗಳನ್ನು ಖಾಸಗಿಯವರಿಗೆ ನೀಡಲಾಗಿದೆ ಎಂಬುದನ್ನು ಪಟ್ಟಿ ಮಾಡಿ ತಕ್ಷಣ ಸಲ್ಲಿಸಬೇಕು. ದುರಸ್ತಿಗೆ ಬೇಕಾಗುವ ಅನುದಾನ ಕುರಿತು ಕೂಡ ಯೋಜನೆಯನ್ನು ರೂಪಿಸಬೇಕು ಎಂದು ಸ್ಥಳದಲ್ಲೇ ಇದ್ದ ಎಂಜಿನಿಯರ್ಗಳಿಗೆ ಸೂಚನೆ ಕೊಟ್ಟರು.
ಇನ್ನು ಪಿಎಲ್‍ಡಿ ಬ್ಯಾಂಕ್ ಕಟ್ಟಡ, ಹಳೇ ಕೋರ್ಟ್ ಆವರಣ ಸೇರಿದಂತೆ ನಗರದಲ್ಲಿರುವ ಸರ್ಕಾರಿ ಕಟ್ಟಡಗಳನ್ನು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲು ವೀಕ್ಷಿಸಿ ಅಲ್ಲಿಯ ಅವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.