ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ಅದರಲ್ಲೂ ಆಸಂಗಿ, ಕುಲಹಳ್ಳಿ ಹಾಗೂ ಹಿಪ್ಪರಗಿ ಗ್ರಾಮಗಳಿಂದ ಭಾರೀ ಪ್ರಮಾಣದ ಮರಳು ಹೊರ ಜಿಲ್ಲೆಗಳಿಗೆ ರಾಜಾರೋಷವಾಗಿ ರವಾನೆಯಾಗುತ್ತಿದ್ದು, ಇತ್ತೀಚೆಗಷ್ಟೇ ಭೂ ವಿಜ್ಞಾನ, ಕಂದಾಯ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಈ ಗ್ರಾಮಗಳ ಸಮೀಪದ ಕೃಷ್ಣಾ ನದಿಯಿಂದ ಅಕ್ರಮವಾಗಿ ಮರಳು ಎತ್ತುವದನ್ನು ಗಮನಿಸಿ ದಾಳಿ ನಡೆಸಿದ ಪರಿಣಾಮ 2 ಸಾವಿರ ಮೆಟ್ರಿಕ್ ಟನ್‍ಗೂ ಅಧಿಕ ಮರಳನ್ನು ಜಪ್ತಿ ಮಾಡಲಾಗಿದೆ.
ದಿನಂಪ್ರತಿ ಬೆಳಗ್ಗಿನಿಂದ ಎಗ್ಗಿಲ್ಲದೆ ಕೃಷ್ಣೆಯ ಎದೆ ಬಗೆದು ಅಕ್ರಮವಾಗಿ ಮರಳನ್ನು ಎತ್ತುವ ಮೂಲಕ ರಾತ್ರಿಯಾಗುತ್ತಿದ್ದಂತೆ ನೆರೆಯ ಪಟ್ಟಣಗಳಿಗೆ ಬೈಕ್‍ಗಳ ಮೂಲಕ ಹಾಗೂ ಹೊರ ಜಿಲ್ಲೆಗಳಿಗೆ ಟ್ರ್ಯಾಕ್ಟರ್‍ಗಳ ಮೂಲಕ ಮರಳು ಸಾಗಿಸುವ ದಂಧೆ ಅವ್ಯಾಹತವಾಗಿ ನಡೆದಿತ್ತು. ಇವೆಲ್ಲದಕ್ಕೂ ಬ್ರೇಕ್ ನೀಡಿರುವ ಅಧಿಕಾರಿಗಳು ಪೊಲೀಸ್ ಹದ್ದಿನ ಕಣ್ಗಾವಲು ಮೂಲಕ ನದಿ ಕಾವಲಿನಲ್ಲಿದ್ದಾರೆ. ಪ್ರತಿ ಬಾರಿ ಬೇಸಿಗೆ ಸಂದರ್ಭದ ಮುರ್ನಾಲ್ಕು ತಿಂಗಳ ಕಾಲ ಹಿಪ್ಪರಗಿ ಹಿನ್ನೀರಿನಲ್ಲಿ ಈ ಅಕ್ರಮ ಮರಳು ದಂಧೆ ಸಾಮನ್ಯವಾಗಿತ್ತು.