ಬಾಗಲಕೋಟೆ: ಗುಳೇದಗುಡ್ಡ ಖಣದಿಂದ ನೇಕಾರರು ಆಕಾಶಬುಟ್ಟಿಗಳನ್ನು ತಯಾರು ಮಾಡುತ್ತಿದ್ದಾರೆ. ಹೆಚ್ಚು ಹೊಳಪು ಹೊಂದಿರುವುದರಿಂದ ಈ ಆಕಾಶಬುಟ್ಟಿಗಳು ಎಲ್ಲರ ಗಮನ ಸೆಳೆಯುತ್ತಿದೆ.
ಇಳಕಲ್ ಸೀರೆ ಎಷ್ಟು ಪ್ರಸಿದ್ಧವೋ ಗುಳೇದಗುಡ್ಡ ಖಣ (ಕುಬಸದ ಬಟ್ಟೆ) ಕೂಡ ಅಷ್ಟೇ ಪ್ರಸಿದ್ದಿ ಪಡೆದಿದೆ. ಗುಳೇದಗುಡ್ಡ ಖಣ ಅಂದ್ರೆ ಸಾಕು ಅದಕ್ಕೊಂದು ವ್ಯಾಲ್ಯೂ ಇದೆ. ಹಿಂದಿನ ಕಾಲದಲ್ಲಿ ಗುಳೇದಗುಡ್ಡ ಖಣ ತೊಡೋದು ಅಂದ್ರೆ ಹೆಂಗಳೆಯರಿಗೆ ಹೆಮ್ಮೆಯ ವಿಷಯ ಆಗಿತ್ತು. ಆದ್ರೆ ಕಾಲ ಬದಲಾದಂತೆ ಮಾರುಕಟ್ಟೆಯಲ್ಲಿ ಗುಳೇದಗುಡ್ಡ ಖಣ ತನ್ನ ಬೇಡಿಕೆ ಕಳೆದುಕೊಂಡಿತ್ತು. ಇದರಿಂದ ಇದನ್ನೇ ನಂಬಿಕೊಂಡಿದ್ದ ನೇಕಾರರ ಜೀವನವೂ ದುಸ್ತರವಾಗಿತ್ತು. ಗುಳೇದಗುಡ್ಡ ಖಣ ತಯಾರಿಕೆಯೂ ಕ್ರಮೇಣ ನಿಂತು ಹೋಗಿತ್ತು.
ಕೊರೊನಾ ಲಾಕ್ಡೌನ್ ಕೂಡ ಸಾಕಷ್ಟು ಹೊಡೆತ ಕೊಟ್ಟಿದೆ. ಲಾಕ್ಡೌನ್ನಿಂದಾಗಿ ಸಂಪೂರ್ಣ ನೇಯ್ಗೆಯೆ ನಿಂತು ಹೋಗಿದ್ದ ಗುಳೇದಗುಡ್ಡ ಖಣಕ್ಕೆ ಮತ್ತೆ ಮರುಜೀವ ಕೊಡುವ ಮೂಲಕ ನೇಕಾರರು ಹೊಸ ಹಾದಿ ಹಿಡಿದಿದ್ದಾರೆ. ಗುಳೇದಗುಡ್ಡ ಖಣಕ್ಕೀಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದಕ್ಕೆ ಕಾರಣ ನೇಕಾರರು ಗುಳೇದಗುಡ್ಡ ಖಣಕ್ಕೆ ನೀಡಿದ ಆಧುನಿಕ ಟಚ್. ಕೇವಲ ಕುಬಸಕ್ಕೆ ಬಳಕೆ ಆಗ್ತಿದ್ದ ಖಣದಲ್ಲಿ ಈಗ ಆಕಾಶಬುಟ್ಟಿ, ಸೀರೆ, ಚೂಡಿದಾರ್, ಮಾಸ್ಕ್, ತಲೆದಿಂಬು, ಪರ್ಸ್ ತಯಾರು ಮಾಡಲಾಗುತ್ತಿದೆ. ಮರು ಬಳಕೆಗೆ ಬಳಸಲು ಬರುವ ರೀತಿ ಇವುಗಳನ್ನು ತಯಾರಿಸಲಾಗಿದೆ. ಹೀಗಾಗಿ ಇವು ಗ್ರಾಹಕರನ್ನು ಹೆಚ್ಚಾಗಿ ಸೆಳೆಯುತ್ತಿವೆ. ಇನ್ನೂ ಕೆಲವೊಂದಿಷ್ಟು ತಯಾರಕರು ಈ ಎಲ್ಲ ವಸ್ತುಗಳನ್ನು ಆನ್ಲೈನ್ ಮೂಲಕವೂ ಮಾರಾಟ ಮಾಡಲು ಆರಂಭಿಸಿದ್ದು, ಕೈಗೆಟಕುವ ದರದಲ್ಲಿ ಲಭ್ಯವಿವೆ.
ಒಟ್ಟಿನಲ್ಲಿ ಆಧುನಿಕ ಭರಾಟೆಗೆ ಸಿಕ್ಕು ತನ್ನ ಅಸ್ತಿತ್ವ ಕಳೆದುಕೊಂಡಿದ್ದ ಗುಳೇದಗುಡ್ಡ ಖಣಕ್ಕೆ ಈಗ ಮತ್ತೆ ಜೀವಕಳೆ ಬಂದಿದೆ. ಜೊತೆಗೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದ ನೇಕಾರರ ಬದುಕಲ್ಲೂ ಭರವಸೆಯ ಬೆಳಕು ಮೂಡಿದೆ.