ಬಾಗಲಕೋಟೆ: ಕಾರ್ಕಳದಲ್ಲಿ ನನ್ನ ಸ್ಪರ್ಧೆ ಬಿಜೆಪಿ ವಿರುದ್ಧ ಅಲ್ಲ. ಆದರೆ, ಬಿಜೆಪಿಯಲ್ಲಿ ಇರುವ ವಿಕೃತಿಗಳು, ಹಿಂದೂ ದ್ರೋಹಿಗಳು, ಭ್ರಷ್ಟರು, ಹಿಂದೂ ಸಿದ್ಧಾಂತ ಹಾಳು ಮಾಡಿದವರ ವಿರುದ್ಧ ನನ್ನ ಹೋರಾಟ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೂ ಸಂಘಟನೆಗಳ ಒಕ್ಕೂಟದಿಂದ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಬಿಜೆಪಿಯಿಂದ ಹಿಂದೂ ಹೋರಾಟಗಾರರಿಗೆ 25 ಸೀಟು ಕೊಡುವಂತೆ ಆಗ್ರಹ ಮಾಡಿದ್ದೇವೆ. ನಮ್ಮ ಮನವಿಗೆ ಬಿಜೆಪಿ ನಮಗೆ ಸ್ಪಂದಿಸಲಿಲ್ಲ.
ಕಾರ್ಕಳದಲ್ಲಿ ಗೆದ್ದು ಹಿಂದುತ್ವದ ಪತಾಕೆ ಹಾರಿಸುವೆ: ಹೀಗಾಗಿ ರಾಜ್ಯದ 25 ಕಡೆಗೆ ಹಿಂದೂ ಸಂಘಟನೆಗಳಿಂದ ಅಭ್ಯರ್ಥಿ ಹಾಕುತ್ತೇವೆ ಎಂದ ಅವರು, ನನಗೆ ಬಾಗಲಕೋಟೆಯ ತೇರದಾಳ ಹಾಗೂ ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಬಂತು. ಕಾರ್ಕಳ ವಿಧಾನಸಭೆ ಕ್ಷೇತ್ರ ಫೈನಲ್ ಆಗಿದೆ. ನೂರಕ್ಕೆ ನೂರು ಗೆದ್ದು ಹಿಂದುತ್ವದ ಪತಾಕೆಯನ್ನು ಕಾರ್ಕಳದ ಮೂಲಕ ಹಾರಿಸುತ್ತೇನೆ ಎಂದು ಪ್ರಮೋದ್ ಮುತಾಲಿಕ್ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಆದರ್ಶ ನರೇಂದ್ರ ಮೋದಿ, ಮೋದಿ ಅವರ ವಿಚಾರಧಾರೆಯನ್ನು ಕಾರ್ಕಳದ ಮೂಲಕ ತರಲು ಕಣಕ್ಕೆ ಇಳಿದಿದ್ದೇನೆ. ನಾನು ಗೆದ್ದರೂ ಬೆಂಬಲಿಸುವುದೇ ಬಿಜೆಪಿ ಪಕ್ಷವನ್ನು ಎಂದ ಅವರು, ಕಾರ್ಕಳದಲ್ಲಿ ಸಚಿವ ಸುನೀಲಕುಮಾರ ಸುತ್ತ ಇರುವವರೆಲ್ಲ ಕಾಂಗ್ರೆಸ್ಸಿನವರು. ಬಿಜೆಪಿ ಕಾರ್ಯಕರ್ತರ ಸಿದ್ಧಾಂತ ಕಡೆಗಣಿಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮುತಾಲಿಕ್ ಆರೋಪಿಸಿದರು.
ಬುದ್ಧಿ ಕಲಿಸಲು ಸ್ಪರ್ಧೆ: ನಾನೇ ಸುನೀಲ ಅವರನ್ನು ಚಿಕ್ಕಮಗಳೂರಲ್ಲಿ ದತ್ತಪೀಠದ ಹೋರಾಟದ ಮೂಲಕ ಜಿಲ್ಲೆಯಿಂದ ರಾಜ್ಯದವರೆಗೂ ನಾನೇ ನಾಯಕನನ್ನಾಗಿ ಮಾಡಿದ್ದು, ಇವತ್ತು ಅವರು ಬರೀ ಡೋಂಗಿ ಹಿಂದೂವಾದ ಮಾಡುತ್ತಿದ್ದು, ಬುದ್ಧಿ ಕಲಿಸಲು ನಾನು ಅವರ ವಿರುದ್ಧ ಸ್ಪರ್ಧೆ ಮಾಡ್ತಿದ್ದೇನೆ ಎಂದು ಹೇಳಿದರು.
ನಾಟಕದ ಹಿಂದುತ್ವವಾದ ತಿದ್ದಬೇಕಿದೆ: ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಓಲೈಕೆ ರಾಜಕಾರಣ ನಡೆದಿದೆ. ರಾಜ್ಯದಲ್ಲಿ ಬಿಜೆಪಿ ವಿರುದ್ಧ ಕಾರ್ಯಕರ್ತರು ಭ್ರಮನಿರಸ ಆಗಿದ್ದಾರೆ. ಸಂಘದ ಮೂಲ ಮನೆಯವರೇ ವೋಟ್ ಹಾಕದೇ ಪ್ರವಾಸಕ್ಕೆ ಹೋಗಲು ರೆಡಿ ಆಗಿದ್ದಾರೆ. ಹೀಗಾಗಿ ಎಲ್ಲ ಹಿಂದೂ ಸಂಘಟನೆಗಳು ಒಟ್ಟಾಗಿ ನಾಟಕ ಮಾಡುತ್ತಿರುವ ಬಿಜೆಪಿಯ ಹಿಂದುತ್ವವಾದ ತಿದ್ದಬೇಕಿದೆ ಎಂದು ಮುತಾಲಿಕ್ ಒತ್ತಾಯಿಸಿದರು.
ಬಿಜೆಪಿ ಅವರಿಗೆ ಪ್ರಮೋದ್ ಮುತಾಲಿಕ್ ಅಥವಾ ಹಿಂದು ಹೋರಾಟಗಾರರಿಗೆ 224 ಕ್ಷೇತ್ರಗಳಲ್ಲಿ ಟಿಕೆಟ್ ಕೊಡಲು ಒಂದು ಸ್ಥಾನ ಕಾಣಲಿಲ್ಲವಾ? ನಿಮ್ಮನ್ನು ಗದ್ದಿಗೇರಿಸಿದವರು ನಾವು, ನಮ್ಮ ರಕ್ತವನ್ನು ನೀರು, ಬೆವರನ್ನಾಗಿಸಿ ಗೆಲ್ಲಿಸಿದವರ ಯಾರು ಎಂದು ಪ್ರಶ್ನೆ ಮಾಡಿದ ಮುತಾಲಿಕ್, ಒಂದು ಚೂರಾದರೂ ಕರುಣೆ ಬೇಡವಾ, ಬರಿ ನಿಮ್ಮ ಮಕ್ಕಳನ್ನು ಮನೆಯವರನ್ನು ಬೆಳೆಸೋದಲ್ಲ, ಬಿಜೆಪಿ ಬೆಳೆಸೋದಕ್ಕೆ ನಂದು ಪಾಲಿದೆ. ಕೇಳೋದಕ್ಕೆ, ನಿಮ್ಮನ್ನು ಬೈಯೋದಕ್ಕೆ ಟೀಕೆ ಮಾಡೋದಕ್ಕೆ ಹಕ್ಕಿದೆ ಎಂದು ತಿಳಿಸಿದರು.
ಹಿಂದು ಹೋರಾಟಗಾರರಿಗೆ ದ್ರೋಹ ಮಾಡಿದ್ದೀರಿ, ಪ್ರಮೋದ್ ಮುತಾಲಿಕ್ ಗೆ ದ್ರೋಹ ಮಾಡಿದ್ದೀರಿ. ಇಡೀ ಕರ್ನಾಟಕದ ಜನ ನಿಮಗೆ ಟಿಕೆಟ್ ಕೊಡಬೇಕಿತ್ತು ಅಂತ ಹೇಳ್ತಿದಾರೆ. ಆದರೆ ನೀವು ದ್ರೋಹ ಮಾಡಿದಿರಿ. ಕಾರ್ಕಳದಲ್ಲಿ ವಿಜಯ ಸಾಧಿಸಿ ಮುಂದಿನ ದಿನಗಳಲ್ಲಿ ನಾನು ಏನು ಅಂತ ತೋರಿಸ್ತಿನಿ ಎಂದು ಮುತಾಲಿಕ್ ಎಚ್ಚರಿಕೆ ರವಾನಿಸಿದರು.
ಬೆಳಗಾವಿ ನನ್ನ ಕರ್ಮ ಕ್ಷೇತ್ರ. ನನ್ನ ಹೋರಾಟ ಆರಂಭಿಸಿದ್ದು ಬೆಳಗಾವಿಯಿಂದ, ಬೆಳಗಾವಿ ನನ್ನ ಜನ್ಮಸ್ಥಳವೂ ಆಗಿದೆ. ಬೆಳಗಾವಿಯಲ್ಲಿ ನಾನು ಗೆದ್ದು ತೋರಿಸ್ತೇನೆ, ಬೆಳಗಾವಿಯನ್ನು ಮಾದರಿಯಾಗಿ ಮಾಡಬೇಕೆಂಬ ಕನಸಿದೆ. ಬಿಜೆಪಿಯ ವರಿಷ್ಠರ ಭೇಟಿಗಾಗಿ ಮೂರು ಮೂರು ಬಾರಿ ದೆಹಲಿಗೆ ಹೋಗಿ ಬಂದಿದ್ದೇನೆ. ಆರ್ಎಸ್ಎಸ್ ವಿಶ್ವ ಹಿಂದೂ ಪರಿಷತ್ ಹಾಗೂ ಸ್ವಾಮೀಜಿ ಬಳಿ ಹೋಗಿ ಬಂದಿದ್ದೇನೆ. ಬಹಳ ದಯನೀಯವಾಗಿ ಟಿಕೆಟ್ ಕೇಳಿದ್ದೆ. ಆದ್ರೆ ಬಿಜೆಪಿ ಮುಖಂಡರ ವರ್ತನೆ ಬೇಸರ ಉಂಟುಮಾಡಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಹೇಳಿದರು.
ಇದನ್ನೂಓದಿ:ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ನಮಗೆ ಸ್ಫೂರ್ತಿ: ಪ್ರಧಾನಿ ಮೋದಿ