ಬಾಗಲಕೋಟೆ : ಸಚಿವರಾದ ಬಳಿಕ ಪ್ರಥಮ ಬಾರಿಗೆ ಜಿಲ್ಲಾ ಪ್ರವಾಸ ಕೈಗೊಂಡಿರುವ ಮುರಗೇಶ ನಿರಾಣಿ ಬಾದಾಮಿ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ತಾಯಿಯವರ ಆಶೀರ್ವಾದ ಪಡೆದದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ನೀಡಿದಕ್ಕೆ ಸಿಎಂ ಬೊಮ್ಮಾಯಿ ಹಾಗೂ ಪಕ್ಷದ, ಪರಿವಾರದ ಹಿರಿಯರಿಗೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ನಮ್ಮ ಜಿಲ್ಲೆಯ ಎಲ್ಲ ಶಾಸಕರು ಲೋಕಸಭಾ ಸದಸ್ಯರು, ಪಕ್ಷದ ಹಿರಿಯರು, ಸಚಿವ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಅವರ ಪ್ರಯತ್ನ ಹಾಗೂ ಅವರ ಆಶೀರ್ವಾದಕ್ಕೆ ಅಭಿನಂದನೆ ಸಲಿಸುತ್ತೇನೆ ಎಂದರು.
ಹಿರಿಯರ ಮಾರ್ಗದರ್ಶನದಲ್ಲಿ ಈ ಖಾತೆಯ ಮೂಲಕ ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ಕೆಲಸ ಮಾಡುತ್ತೇನೆ. ಈ ಹಿಂದಿನ ಸರ್ಕಾರದಲ್ಲಿ ಜಾಗತಿಕ ಬಂಡವಾಳ ಹೂಡಿಕೆಗೆ ಸಮಾವೇಶ ಮಾಡಿ, ಇಡೀ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ್ದೆ. ಈ ಬಾರಿಯೂ ರಾಜ್ಯದ ಕೈಗಾರಿಕೆಗಳನ್ನು ಬೆಳೆಸುವ ಮೂಲಕ ದೇಶಕ್ಕೆ ಮಾದರಿ ರಾಜ್ಯವನ್ನಾಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಸಂಘಪರಿವಾರದ ಹಿನ್ನೆಲೆಯಲ್ಲಿ ಬೆಳೆದು ಬಂದ ನಾವು ಖಾತೆಗಾಗಿ ಕ್ಯಾತೆ ತೆಗೆಯುವವರಲ್ಲ. ನಾನು, ಸಿಎಂ ಬಸವರಾಜ ಬೊಮ್ಮಾಯಿ ಒಂದೇ ಕಾಲೇಜಿನಲ್ಲಿ ಓದಿದವರು. ಅವರಿಗೆ ನನ್ನ ಬಗ್ಗೆ ಗೊತ್ತಿದೆ. ನಿನಗೆ ಯಾವ ಖಾತೆ ಬೇಕು ಅಂತಾ ಕೇಳಿದರು. ಅದಕ್ಕೆ ನಾನು ನಿಮಗೆ ನನ್ನ ಬಗ್ಗೆ ಗೊತ್ತಿದೆ ಯಾವ ಖಾತೆ ಕೊಟ್ಟರೂ ಸೂಕ್ತವಾಗಿ ನಿಭಾಯಿಸುತ್ತೇನೆ ಎಂದಿದ್ದೆ ಎಂದು ತಿಳಿಸಿದರು.
ನಾನು ಮಾಧ್ಯಮ ಸ್ನೇಹಿತರ ಪ್ರಶ್ನೆಗೆ ಈ ಹಿಂದೆನೆ ಹೇಳಿದ್ದೆ. ಎಲ್ಲರೂ ತೆಗೆದುಕೊಂಡು ಬಿಟ್ಟ ಖಾತೆಯನ್ನ ಕೊಟ್ಟರೂ ನಿಭಾಯಿಸುತ್ತೇನೆ ಎಂದಿದ್ದೆ. ಈಗ ಸಿಎಂ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯನ್ನ ನೀಡಿದ್ದಾರೆ. ಇದು ಅತ್ಯಂತ ದೊಡ್ಡ ಇಲಾಖೆ ಹಾಗೂ ಹೆಚ್ಚು ತೆರಿಗೆ ತರುವ ಇಲಾಖೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವ ಇಲಾಖೆಯಾಗಿದೆ. ಹೀಗಾಗಿ, ಕೊಟ್ಟ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.