ಬಾಗಲಕೋಟೆ: ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ನೆಲಗಟ್ಟನ್ನು ಹೊಂದುವುದರ ಜೊತೆಗೆ ನಾಡ ಹೆಮ್ಮೆಯನ್ನು ಹೊಂದಿದ್ದ ಅಂದಿನ ಮುದುವೊಳಲ್ ಇಂದಿನ ಮುಧೋಳ ಪಟ್ಟಣವಾಗಿದೆ. ಈ ಮೂಲಕ ಅದು ದೇಶೀಯ ಶ್ವಾನಕ್ಕೆ ಹೆಸರುವಾಸಿಯಾಗಿದೆ. ದೇಶಿಯ ತಳಿ ಎಂಬ ಹೆಗ್ಗಳಿಕೆ ಹೊಂದಿರುವ ಮುಧೋಳ ಶ್ವಾನ ತನ್ನ ವಿಶಿಷ್ಟ ಆಕಾರ, ಕತೃತ್ವ ಶಕ್ತಿ, ಚಾಕಚಕ್ಯತೆಯಿಂದ ಇಂದು ದೇಶೀಯ ಮಿಲಿಟರಿ ಪಡೆಗೂ ಸೇರ್ಪಡೆಯಾಗುವ ಮೂಲಕ ಕೇವಲ ನಾಡ ಹೆಮ್ಮೆಯಾಗಿ ಉಳಿಯದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ.
ಉದ್ದನೆಯ ಮೂತಿ, ಉದ್ದನೆಯ ಕಾಲುಗಳು, ಕ್ರೂರ ನಡೆ, ವೇಗದ ಊಟ, ಸಣಕಲು ದೇಹ, ಆಕ್ರಮಣಕಾರಿ ವ್ಯಕ್ತಿತ್ವ ಹೊಂದಿರುವ ಮುಧೋಳ ಶ್ವಾನಗಳು ಒಂಟಿಯಾಗಿ ಇರಲು ಇಷ್ಟಪಡುತ್ತವೆ. ಈ ಜಾತಿಯ ನಾಯಿಯ ವೈಶಿಷ್ಟ್ಯತೆ ಎಂದರೆ, ಜಿಗಿಯುವಿಕೆಯು ಓಡುವುದಕ್ಕಿಂತ ಹಾರುತ್ತಿರುವ ಹಾಗೆ ಕಂಡು ಬರುತ್ತದೆ. ದೇಹ ಬಲಿಷ್ಠ ಸ್ನಾಯುಗಳಿಂದ ಕೂಡಿದ್ದು, ಎದೆಯ ಮುಂಭಾಗ ಉದ್ದ ಹಾಗೂ ಆಳವಾಗಿರುತ್ತದೆ. ಹೊಟ್ಟೆಯ ಭಾಗ ತೆಳುವಾಗಿದ್ದು, ಬೆನ್ನಿನ ಭಾಗ ಅಗಲವಾಗಿರುತ್ತದೆ. ಮುಂಗಾಲುಗಳು ನೇರ ಹಾಗೂ ಉದ್ದವಾಗಿ ಸೊಂಟದ ಎಲಬುಗಳು ಅಗಲವಾಗಿ ಪಾದಗಳು ಉದ್ದವಾಗಿದ್ದು, ಗಟ್ಟಿಯಾದ ತಳಪಾದ ಹೊಂದಿರುತ್ತದೆ. ಬಾಲ ಮೂಲದಲ್ಲಿ ದಪ್ಪವಾಗಿ ಹಾಗೂ ತುದಿಯ ಕಡೆಗೆ ತೆಳುವಾಗಿ ಸ್ವಲ್ಪ ಬಾಗಿರುತ್ತದೆ.
ಮುಧೋಳ ಹೌಂಡ್ ತಳಿ ಶ್ವಾನಗಳ ಸಂರಕ್ಷಣೆಗಾಗಿ ಮುಧೋಳದ ತಿಮ್ಮಾಪುರದಲ್ಲಿ ಕಪಪಮೀವಿವಿ ಬೀದರ್ ಸ್ಥಾಪಿಸಿದ ಶ್ವಾನ ಸಂಶೋಧನೆ ಮತ್ತು ಮಾಹಿತಿ ಕೇಂದ್ರ ದೇಶದಲ್ಲೇ ಏಕೈಕ ಸಂಸ್ಥೆ. ಭಾರತೀಯ ಅಂಚೆ ಇಲಾಖೆ 2005 ಜನವರಿ 9ರಂದು ಈ ತಳಿಯ ಅಂಚೆ ಚೀಟಿಯನ್ನು ಹೊರ ತಂದಿದೆ. ಈ ಮುಧೋಳ ಶ್ವಾನಗಳಿಗೆ ಕ್ಯಾರವಾನ್, ಕಾವಾನಿ, ಪಶ್ಮಿ ಎಂದು ಸಹ ಕರೆಯಲಾಗುತ್ತದೆ. ಇವುಗಳ ಮಧ್ಯೆ ಮುಧೋಳ ನಾಯಿಗೆ ಈಗ ಮತ್ತೊಂದು ಗರಿ ಮೂಡಿದ್ದು, ಭಾರತೀಯ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿವೆ. ಈ ಮೂಲಕ ಭಾರತೀಯ ಸೇನೆಗೆ ಸೇರಿದ ಮೊದಲ ದೇಶಿಯ ನಾಯಿಗಳು ಎಂಬ ಕೀರ್ತಿಗೆ ಮುಧೋಳ ಬೇಟೆ ನಾಯಿಗಳು ಪಾತ್ರವಾಗಿವೆ.