ಬಾಗಲಕೋಟೆ : ಸಿದ್ದರಾಮಯ್ಯಗೆ ಸಿಎಂ ಖುರ್ಚಿ ಕಳೆದುಕೊಂಡ ಬಳಿಕ ಯಾವುದೇ ಖುರ್ಚಿ ಮೇಲೆ ಕುಳಿತರೂ ಮುಳ್ಳು ಚುಚ್ಚಿದ ಹಾಗೇ ಆಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನನೇ ಬೇಕು ಅಂತಾರೆ. ಅದೊಂದೇ ಅವರಿಗೆ ಮೆತ್ತಗೆ ಇರೋ ಖುರ್ಚಿ ಅನಿಸುತ್ತದೆ. ಆದಷ್ಟು ಬೇಗ ಮತ್ತೆ ಮುಖ್ಯಮಂತ್ರಿ ಆಗಬೇಕು ಅನ್ನೋ ಭ್ರಮೆಯಲ್ಲಿದ್ದಾರೆ.
ನಾನೇ ಸಿಎಂ ಅಂತಾ ಹೇಳಿಕೊಳ್ಳುತ್ತಾರೆ. ನೀವು ಹೇಳ ಕೂಡದು ಅಂದಿದ್ದಕ್ಕೆ ತಮ್ಮ ಶಿಷ್ಯಂದಿರ ಮೂಲಕ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿಸಿಕೊಂಡಿದ್ದಾರೆ. ಪಾಪ ಇದಕ್ಕೆ ಡಿಕೆಶಿ ಸುಮ್ಮನೆ ಇರ್ತಾರಾ, ಅವರ ಬೆಂಬಲಿಗರು ಡಿಕೆ... ಡಿಕೆ.. ಎಂದು ಕೂಗಿದರು. ಹೀಗೆ ಸಿಎಂ ಆಗಬೇಕೆನ್ನುವ ಕನಸನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಾಣುತ್ತಿದ್ದಾರೆ. ಆದರೆ, ಜನ ಇವರನ್ನು ಗೆಲ್ಲಿಸೋದಿಲ್ಲ. ಕಾಂಗ್ರೆಸ್ ದೇಶ, ರಾಜ್ಯದಲ್ಲಿ ಇಲ್ಲವಾಗಿದೆ ಎಂದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು : ವಿಧಾನಪರಿಷತ್ ಚುನಾವಣೆ ಗೆಲುವಿನ ಲೆಕ್ಕಾಚಾರದ ವಿಚಾರವಾಗಿ ಮಾತನಾಡಿ, ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಸದಸ್ಯರು ಹೆಚ್ಚಿದ್ದಾರೆ. ಹೀಗಾಗಿ, ಬಿಜೆಪಿ ಕನಿಷ್ಠ 15 ರಿಂದ16 ಜನ ಪರಿಷತ್ತಿನಿಂದ ಆಯ್ಕೆ ಆಗುತ್ತಾರೆ. ಕಾಂಗ್ರೆಸ್ನಲ್ಲಿ ಪರಿಚಯ ಇಲ್ಲದೆ ಇರುವ ವ್ಯಕ್ತಿಗಳಿಗೆ ಹಾಗೂ ಶ್ರೀಮಂತರನ್ನು ನೋಡಿ ಟಿಕೆಟ್ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂದು ಭವಿಷ್ಯ ನುಡಿದರು.
ಭೂತು ಕನ್ನಡಿ ಹಿಡಿದು ಕಾಂಗ್ರೆಸ್ ಅನ್ನು ಹುಡುಕಬೇಕು : ಚುನಾವಣೆಗಳಲ್ಲಿ ಪಕ್ಷಾಂತರ ನಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜಕಾರಣ ಇರುವ ತನಕ ಈ ಪಕ್ಷಾಂತರ ವ್ಯವಸ್ಥೆ ಇರುತ್ತದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ, ಯಾವ ಪಕ್ಷದ ನಾಯಕರು ಒಳ್ಳೆಯವರಿರುತ್ತಾರೋ ಆ ಪಕ್ಷ ಆಯಸ್ಕಾಂತದಂತೆ ಬೇರೆ ಬೇರೆ ರೂಪದಲ್ಲಿಆಕರ್ಷಣೆ ಮಾಡುತ್ತದೆ.
ಆ ದಿಕ್ಕಿನಲ್ಲಿ ವರ್ತೂರು ಪ್ರಕಾಶ್ ಬಿಜೆಪಿ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಸುಧಾಕರ್, ಮುನಿರತ್ನ ಅವರೆಲ್ಲ ಭೇಟಿ ಮಾಡಿದ್ದಾರೆ. ಅವರ ಅನುಯಾಯಿಗಳೆಲ್ಲ ಬಿಜೆಪಿಗೆ ಬೆಂಬಲಿಸ್ತಾರೆ ಎಂಬ ವಿಶ್ವಾಸವಿದೆ. ವರ್ತೂರು ಅಷ್ಟೇ ಅಲ್ಲ, ಬರುವ ದಿನಗಳಲ್ಲಿ ದೇಶ, ರಾಜ್ಯದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಎಲ್ಲಿದೆ ಎಂದು ಭೂತಕನ್ನಡಿ ಹಿಡಿದು ನೋಡಬೇಕು. ಎಲ್ಲಾ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿದೆ ಎಂದರು.
ಸೋಲು ಅಂದ್ರೆ ಇವತ್ತು ಕಾಂಗ್ರೆಸ್ : ಮೂರು ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದರು. ಮೂರು ಕಡೆ ಕಾಂಗ್ರೆಸ್ ನೆಗೆದು ಬಿದ್ದು ಹೋಯ್ತು. ಅದಕ್ಕಿಂತ ಮುಂಚೆ ಎಲ್ಲಾ ಉಪಚುನಾವಣೆ ಗೆಲ್ಲುತ್ತೇವೆ ಎಂದಿದ್ದರು. ಎಲ್ಲಾ ಕಡೆ ಸೋತರು. ಹಾಗಾಗಿ, ಸೋಲು ಅಂದ್ರೆ ಇವತ್ತು ಕಾಂಗ್ರೆಸ್. ಹೀಗಿರಬೇಕಾದರೂ ಅವರಿಗೆ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭ್ರಮೆ ಇದೆ.
ಇನ್ಮುಂದೆ ಸಿದ್ದರಾಮಯ್ಯ ಬಾಯಲ್ಲಿ ಹಿಂದುಳಿದ ವರ್ಗಗಳ ನಾಯಕ ಅಂತಾ ಬರಬಾರದು. ನರೇಂದ್ರ ಮೋದಿ ಕೇಂದ್ರ ಸಂಪುಟದಲ್ಲಿ 27 ಜನ ಹಿಂದುಳಿದವರನ್ನು ಮಂತ್ರಿ ಮಾಡಿದರು. 20 ಜನ ದಲಿತರನ್ನು ಮಂತ್ರಿ ಮಾಡಿದರು. ಸಿದ್ದರಾಮಯ್ಯ ದಲಿತರು ಹಿಂದುಳಿದವರಿಗೆ ಏನು ಮಾಡಿದರು?. ರಮೇಶ್ ಕುಮಾರ್, ದೇವರಾಜ ಅರಸು ಬಿಟ್ಟರೆ ಸಿದ್ದರಾಮಯ್ಯನವರೆ ಹಿಂದುಳಿದ ವರ್ಗಗಳ ಉದ್ದಾರಕ ಎಂದು ಪಟ್ಟ ಕೊಟ್ಟು ಬಿಟ್ಟರು.
ಕಾಂಗ್ರೆಸ್ನವರನ್ನು ರಾಜ್ಯದ ಜನ ಸೋಲಿಸಿ ತಿರಸ್ಕಾರ ಮಾಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತು ಬದಾಮಿಗೆ ಬಂದಿದ್ದೀರಿ, ಈ ಸಾರಿ ಬದಾಮಿಯಲ್ಲಿ ಸ್ಪರ್ಧೆ ಮಾಡಲಿ ನೋಡೋಣ ಗೊತ್ತಾಗುತ್ತದೆ ಎಂದು ಕಿಡಿಕಾರಿದರು. ನಂತರ ಬೀಳಗಿ ಪಟ್ಟಣದ ಹಿಂದುಳಿದ ವರ್ಗದ ಘಟಕ ಕಾರ್ಯಕಾರಣಿ ಸಭೆಯಲ್ಲಿ ಸಚಿವ ಈಶ್ವರಪ್ಪನವರು ಭಾಗಿಯಾಗಿದ್ದರು.
ಭವಿಷ್ಯದಲ್ಲಿ ಮುರುಗೇಶ್ ನಿರಾಣಿ ಸಿಎಂ ಆಗ್ತಾರೆ: ಬೀಳಗಿ ಪಟ್ಟಣದ ಹಿಂದುಳಿದ ವರ್ಗದ ಘಟಕದ ಕಾರ್ಯಕಾರಣಿ ಸಭೆಯಲ್ಲಿ ಮತನಾಡಿದ ಈಶ್ವರಪ್ಪ, ಸಚಿವ ಮುರುಗೇಶ್ ನಿರಾಣಿ ಆದಷ್ಟು ಬೇಗ ರಾಜ್ಯದ ಮುಖ್ಯಮಂತ್ರಿ ಆಗ್ತಾರೆ ಎಂದು ಹೊಸ ಬಾಂಬ್ ಸಿಡಿಸಿದರು. ಯಾವಾಗ ಎಂದು ಗೊತ್ತಿಲ್ಲ. ಮುಂದೆ ಯಾವತ್ತೋ ಒಂದುದಿನ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗ್ತಾರೆ.
ಅವರಿಗೆ ಆ ಶಕ್ತಿ ಇದೆ. ಹಾಗಂತ ನಾಳೆಯೇ ಬಸವರಾಜ ಬೊಮ್ಮಾಯಿ ಅವರನ್ನು ತೆಗಿತಾರೆ ಅಂತ ಬರೆಯಬೇಡಿ. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗಿ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಾರೆ ಎಂದರು. ಈಶ್ವರಪ್ಪನವರ ಭಾಷಣಕ್ಕೆ ಫುಲ್ ಖುಷಿಯಾದ ಸಚಿವ ಮುರಗೇಶ ನಿರಾಣಿ ಸಕ್ಸಸ್ ಗುರುತು ತೋರಿಸಿ ಜನತೆಗೆ ಕೈ ಮುಗಿದು ಮತ್ತೆ ಕುಳಿತರು.