ಬಾಗಲಕೋಟೆ: ಜನರು ಸಂಕಷ್ಟದಲ್ಲಿದ್ದಾರೆ, ಈಗ ಉತ್ಸವ ಬೇಕಾ ಎಂದು ಸಚಿವ ಸಿ.ಸಿ ಪಾಟೀಲ್ ಅವರು ಸಿದ್ದರಾಮೋತ್ಸವ ಬಗ್ಗೆ ಕಿಡಿ ಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮೋತ್ಸವ ಬರುತ್ತೋ, ಶಿವಕುಮಾರೋತ್ಸವ ಬರುತ್ತೋ, ನಾಳೆ ಪರಮೇಶ್ವರ ಉತ್ಸವ ಬರುತ್ತೋ...ಬರಲಿ ನೋಡೋಣ. ಉತ್ಸವಕ್ಕೆ ನಾಲ್ಕು ಜನರು ಬಂದು ಊಟ ಮಾಡಿ ಹೋಗ್ತಾರೆ ಅಂದರೆ ಮಾಡಲಿ ಎಂದು ವ್ಯಂಗ್ಯವಾಡಿದರು.
ನಮ್ಮಲ್ಲಿ ಏನಿದ್ದರೂ ಬಿಜೆಪಿ ಉತ್ಸವ, ಕಮಲದ ಉತ್ಸವ ಇರುತ್ತೆ. ನಮಗೆ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂದರು. ಸಿದ್ದರಾಮಯ್ಯ ಅವರಂತಹ ಹಿರಿಯರೇ ಹೀಗೆ ಮಾಡುತ್ತಾರಂದ್ರೆ ಏನು ಹೇಳಬೇಕು. ಚುನಾವಣೆಗೆ ಇನ್ನೂ ಒಂದು ವರ್ಷ ಇದೆ. ರಾಜ್ಯವನ್ನು ತಮ್ಮ ಹಿಡಿತಕ್ಕೆ ತರಲು ಮಾತ್ರ ಈ ಉತ್ಸವ ಎಂದು ಸಿಸಿ ಪಾಟೀಲ್ ಟೀಕಿಸಿದರು.
ಸಿಎಂ ಬೊಮ್ಮಾಯಿ ಅವರು ಎರಡೇ ದಿನದಲ್ಲಿ 4 ಜಿಲ್ಲೆಗಳಲ್ಲಿ ಓಡಾಡಿದರು. ಮಳೆ ಹಾನಿಗೆ ಪರಿಹಾರ ನೀಡಲಾಗಿದೆ. ಕಷ್ಟ ಕಾಲದಲ್ಲಿ ಜನರ ಬಳಿ ಒಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಆದರೆ ಇವರ ಉತ್ಸವಕ್ಕೆ ನಾವೇನು ಹೇಳಬೇಕು ಎಂದು ಲೇವಡಿ ಮಾಡಿದರು.
ಇದೇ ಸಂದರ್ಭದಲ್ಲಿ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಾತನಾಡಿ, ನನ್ನ ನಡೆ ತಂತಿ ಮೇಲಿದೆ. ಸಿಎಂ ಅವರು ಬಸವಜಯ ಮೃತ್ಯುಂಜಯ ಶ್ರೀಗಳ ಜೊತೆ ಮಾತನಾಡಿದ್ದಾರೆ. ಸರ್ಕಾರ ಕೇವಲ ಒಂದೇ ಜಾತಿಯನ್ನು ನೋಡಲಿಕ್ಕೆ ಆಗಲ್ಲ, ಉಳಿದ ಸಮಾಜದವರ ಹಿತ ಕಾಪಾಡುವ ಕೆಲಸ ಕೂಡ ಸರ್ಕಾರದ ಹೊಣೆ. ಅದಕ್ಕೆ ಸಿಎಂ ದಾರಿ ಹುಡುಕುತ್ತಿದ್ದಾರೆ. ಸಿಎಂ ಕೆಲಸ ಮಾಡುತ್ತಾರೆನ್ನುವ ವಿಶ್ವಾಸ ಸ್ವಾಮೀಜಿಯವರಲ್ಲೂ ಇದೆ ಎಂದರು.
ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಸ್ಥಳೀಯರು ಇದಕ್ಕೆ ಕೈಜೋಡಿಸಿರುವುದರಿಂದ ಇಂತಹದ್ದೆಲ್ಲ ನಡೆಯುತ್ತದೆ. ಅಕ್ರಮ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.
ಇದನ್ನೂ ಓದಿ: ಸಿದ್ದರಾಮೋತ್ಸವದ ಬಗ್ಗೆ ಕಾಂಗ್ರೆಸ್ ನಲ್ಲಿಯೇ ನಡುಕ ಶುರುವಾಗಿದೆ.. ಶೆಟ್ಟರ್ ಅಪಹಾಸ್ಯ
ರಾಜ್ಯದಲ್ಲಿ ಬಿಜೆಪಿಗರು ಅಧಿಕಾರಕ್ಕೆ ಬಂದಾಗಲೆಲ್ಲಾ ಪ್ರವಾಹ ಸಂಕಷ್ಟ ಎದುರಾಗುತ್ತದೆ ಎನ್ನುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಕಾಲದಲ್ಲಿ ಬರಗಾಲ ಇತ್ತು. ಒಣಗಿದ್ದು ತೋಯಬೇಕಾದರೆ ಪ್ರವಾಹ ಬರಬೇಕಾಗುತ್ತೆ. ಭೂಮಿ ಒಣಗಿ ಹೋಗಿತ್ತು. ಅಂತರ್ಜಲ ಮಟ್ಟ 1500 ಮೀಟರ್ಗೆ ತಲುಪಿತ್ತು.
ಈಗ 100 ಮೀಟರ್ಗೆ ಬಂದಿದೆ. ಬರಗಾಲ ಸರಿಯಾಗಬೇಕಾದರೆ ಮಳೆ ಬರಬೇಕು ಎಂದರು. ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆರೂರ ಗುಂಪು ಘರ್ಷಣೆಯ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.