ಬಾಗಲಕೋಟೆ : ಸಾಮಾನ್ಯವಾಗಿ ದೇವರಿಗೆ ಜಾತ್ರಾ ಮಹೋತ್ಸವ ಸಮಯದಲ್ಲಿ ಉತ್ತತ್ತಿ,ಹೂ, ಹಣ್ಣು ಎಸೆಯುತ್ತಾರೆ. ಆದರೆ, ಈ ದೇವಾಲಯದಲ್ಲಿ ಮಾತ್ರ ತೆಂಗಿನಕಾಯಿ ಎಸೆಯುವುದು ವಿಶೇಷ. ಇಂತಹ ವಿಶೇಷ ನಡೆಯುವುದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಸೂಳಿಕೇರಿ ಗ್ರಾಮ ಮಾರುತೇಶ್ವರ ದೇವಾಲಯ ಜಾತ್ರಾ ಮಹೋತ್ಸವದಲ್ಲಿ.
ಪ್ರತಿ ವರ್ಷ ಕಾರ್ತಿಕ ಮಾಸ ಹುಣ್ಣಿಮೆ ದಿನದಂದು ಇಲ್ಲಿನ ಜಾತ್ರೆ ನಡೆಯುತ್ತದೆ. ನೂರಾರು ವರ್ಷಗಳ ಇತಿಹಾಸ ಇರುವ ಈ ಮಾರುತೇಶ್ವರ ದೇವಾಲಯಕ್ಕೆ ತೆಂಗಿನಕಾಯಿ ಎಸೆಯುವುದು ವಿಶೇಷವಾಗಿದೆ. ರಾಜ್ಯದಲ್ಲಿಯೇ ಇಂತಹ ಜಾತ್ರೆ ಎಲ್ಲಿಯೂ ನಡೆಯುವುದಿಲ್ಲ.
ಜಾತ್ರೆಯ ನಿಮಿತ್ತ ಮಾರುತೇಶ್ವರ ದೇವರಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ, ಪುನಸ್ಕಾರ ನಡೆಯುತ್ತದೆ. ಸಂಜೆ ಸಮಯದಲ್ಲಿ ಜಾತ್ರೆ ನಡೆಯುತ್ತದೆ. ಗೋಧೋಳಿ ಸಮಯದಲ್ಲಿ ನಡೆಯುವ ಜಾತ್ರೆಯ ಮುಂಚೆ ದೇವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಾ ದೇವಾಲಯಕ್ಕೆ ಪಲ್ಲಕ್ಕಿ ಕರೆತರಲಾಗುತ್ತದೆ. ನಂತರ ಐದು ಸುತ್ತು ದೇವಾಲಯ ಪ್ರದರ್ಶನ ಹಾಕಿದ ಬಳಿಕ ಭಕ್ತರು, ತೆಂಗಿನಕಾಯಿ ಎಸೆಯುವುದಕ್ಕೆ ಪ್ರಾರಂಭಿಸುತ್ತಾರೆ.
ಭಕ್ತರು ತಮ್ಮ ಹರಕೆಯಂತೆ ಎಷ್ಟು ಕಾಯಿ ಎಸೆಯುತ್ತೇನೆ ಎಂದು ಬೇಡಿಕೊಂಡಿದ್ದ ಪ್ರಮಾಣದಷ್ಟು ಕಾಯಿಯನ್ನು ಗೋಪುರ ಮೇಲೆ ತೂರುತ್ತಾರೆ. ಸುಮಾರು ಅರ್ಧ ಗಂಟೆಗಳ ಕಾಲ ಕಾಯಿ ಎಸೆಯುವ ಕಾರ್ಯ ನಡೆಯುತ್ತದೆ. ತೆಂಗಿನಕಾಯಿಯನ್ನು ಯಾಕೆ ಎಸೆಯುತ್ತಾರೆ ಎಂಬುದು ಈವರೆಗೂ ಯಾರಿಗೂ ಗೊತ್ತಿಲ್ಲ. ಸಂಪ್ರದಾಯದಂತೆ ಕಾಯಿ ಎಸೆಯುತ್ತಾ ಇಂದಿನ ಪೀಳಿಗೆ ಬರುತ್ತಿದೆ.