ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದಿಂದ ಸಾಕಷ್ಟು ಗ್ರಾಮಗಳಿಗೆ ನೀರು ನುಗ್ಗಿ ತೊಂದರೆ ಉಂಟಾಗಿದೆ. ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ನದಿ ನೀರು ನುಗ್ಗಿದ ಪರಿಣಾಮ ಜನತೆ ಆತಂಕ ಪಡುತ್ತಿದ್ದಾರೆ.
ಗ್ರಾಮದ ಕುಂಬಾರ ಗಲ್ಲಿ ಮಳೆ ರಸ್ತೆ ನೀರಿನಿಂದ ಆವರಿಸಿದ್ದು, ಸ್ಥಳೀಯರು ಪರದಾಡುವಂತಾಗಿದೆ. ಗ್ರಾಮದ ಸೇತುವೆ, ಹೊಲ-ಗದ್ದೆಗಳು ಜಲಾವೃತಗೊಂಡಿವೆ. ಸಾವಿರಾರು ಎಕರೆ ಜಮೀನಿಗೂ ನೀರು ನುಗ್ಗಿ ರೈತರು ಪರದಾಡುವಂತಾಗಿದೆ.
ಕಳೆದ ವರ್ಷವೂ ಪ್ರವಾಹದಲ್ಲಿ ಸಂಪೂರ್ಣ ಜಲಾವೃತವಾಗಿದ್ದ ಹೆಬ್ಬಳ್ಳಿ ಗ್ರಾಮ, ಈ ವರ್ಷವೂ ನೀರು ಬಂದು ಪರದಾಡುವಂತಾಗಿದೆ. ಹೆಬ್ಬಳ್ಳಿ - ಮುಮರಡ್ಡಿಕೊಪ್ಪ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದ್ದರೆ, ಗದಗ ಜಿಲ್ಲೆ ಹೊಳೆ ಆಲೂರು ಸಂಪರ್ಕ ಬಂದ್ ಆಗಿ, ಸಂಚಾರಕ್ಕೆ ತೊಂದರೆ ಉಂಟಾಗಿದೆ. ಬಾದಾಮಿ ತಾಲೂಕಿನ ಹೆಬ್ಬಳ್ಳಿ, ಮುಮರಡ್ಡಿಕೊಪ್ಪ, ಜಕನೂರು, ನೀರಲಗಿ, ಕಾತರಕಿ, ತಮಿನಾಳ, ಖ್ಯಾಡ, ಮಣ್ಣೇರಿ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಈ ಮಧ್ಯೆ ಚೊಳ್ಳಚಗುಡ್ಡ ಸೇತುವೆ ಸಂಪೂರ್ಣ ಮುಳುಗಡೆ ಆಗಿದ್ದು, ಬಾಗಲಕೋಟೆ - ಗದಗ ಮಾರ್ಗ ಸ್ಥಗಿತಗೊಂಡಿದೆ. ಕಳೆದ ರಾತ್ರಿಯಿಂದಲೇ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಮಾಣಿಕರು ಪರದಾಡುವಂತಾಗಿದೆ.
ಮಲಪ್ರಭಾ ನದಿ ಅಬ್ಬರದಿಂದ ಬಾದಾಮಿ ತಾಲೂಕಿನ ಬೀರನೂರು ಗ್ರಾಮಕ್ಕೆ ನೀರು ನುಗ್ಗಿ, ಮನೆಗಳಿಗೆ ತೊಂದರೆ ಉಂಟಾಗಿದೆ. ಗ್ರಾಮದ ಬೀದಿ ಬೀದಿಯಲ್ಲಿ ನೀರು ಹರಿಯುತ್ತಿದ್ದು, ರಸ್ತೆಗಳೇ ನದಿಗಳ ಸ್ವರೂಪ ಪಡೆದುಕೊಂಡಿವೆ.
ಕಳೆದ ವರ್ಷ ಸಂಪೂರ್ಣ ಮುಳುಗಡೆಯಾಗಿದ್ದ ಬೀರನೂರು ಗ್ರಾಮ ಮತ್ತೆ ಮುಳುಗಡೆ ಭೀತಿಯಲ್ಲಿದ್ದು, ಬೀರನೂರು ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಇದರ ಜೊತೆಗೆ ಮಲಪ್ರಭಾ ನದಿ ಅಬ್ಬರದಿಂದ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರ ಸೇತುವೆ ಜಲಾವೃತಗೊಂಡಿದ್ದು, ಬಾಚಿನಗುಡ್ಡ, ಮಂಗಳೂರು, ಶಿರಬಡಗಿ ಗೋನಾಳ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಕಳೆದ ವರ್ಷವೂ ಶಿವಯೋಗ ಮಂದಿರದ ಸೇತುವೆ ಮುಳುಗಡೆಯಾಗಿತ್ತು.
ವೀರಶೈವ ಲಿಂಗಾಯತ ಶಕ್ತಿ ಪೀಠ ಎಂದು ಖ್ಯಾತಿ ಪಡೆದಿರುವ ಶಿವಯೋಗ ಮಂದಿರ ಜಲಾವೃತಗೊಂಡಿದ್ದು, ಶ್ರಾವಣ ಮಾಸ ಹಿನ್ನೆಲೆ ಆಗಮಿಸುತ್ತಿರುವ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.