ಬಾಗಲಕೋಟೆ: ಒಂದು ತಿಂಗಳ ಹಿಂದೆಯೇ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕೋರಿ ಮಹಾರಾಷ್ಟ್ರದ ಸಿಎಂಗೆ ರಾಜ್ಯ ನಾಯಕರು ಮನವಿ ಮಾಡಿದ್ದರು. ಆದ್ರೆ ಇಂದಿಗೂ ಒಂದು ತೊಟ್ಟು ನೀರು ಬಾರದೇ ಇರುವುದು ದುರದೃಷ್ಟಕರ ಸಂಗತಿ.
ಕಳೆದ ತಿಂಗಳು ರಾಜ್ಯದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಉಭಯ ಪಕ್ಷಗಳ ಮುಖಂಡರು ಮಹಾರಾಷ್ಟ್ರದ ಸಿಎಂ ಭೇಟಿ ಮಾಡಿ ಅವರಿಂದ ನೀರು ಬಿಡುಗಡೆಗೊಳಿಸುವ ಭರವಸೆಯೊಂದಿಗೆ ರಾಜ್ಯಕ್ಕೆ ಹಿಂದಿರುಗಿದ್ದರು. ಇದೀಗ ರಾಜ್ಯ ನಾಯಕರು ನೀಡಿದ್ದ ಹುಸಿ ಭರವಸೆಗೆ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಮತ್ತು ನೀರು ಬರುವ ಯಾವುದೇ ನಿರೀಕ್ಷೆಯನ್ನು ಜನತೆ ಇಟ್ಟುಕೊಂಡಿಲ್ಲ.
ವಿಜಯಪುರ-ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಸಂಜೀವಿನಿಯಾಗಿರುವ ಕೃಷ್ಣೆಯು ಸಂಪೂರ್ಣ ಬತ್ತಿ ಹೋಗಿ ಎರಡು ತಿಂಗಳುಗಳು ಗತಿಸಿವೆ. ಮೂರು ಜಿಲ್ಲೆಗಳಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದ್ದು, ಜನ ಉದ್ಯೋಗ ಬಿಟ್ಟು ನೀರಿಗಾಗಿ ಅಲೆದಾಡುವಂತಾಗಿದೆ.
ಹಲವಾರು ಬಾರಿ ರೈತ ಸಂಘಟನೆ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಪ್ರತಿಭಟನೆ ನಡೆಸಿದರೂ ಯಾವುದೇ ಉಪಯೋಗವಾಗದೇ ಇರುವುದು ವಿಪರ್ಯಾಸವೇ ಸರಿ. ಇನ್ನು ಗಡಿ ಭಾಗದ ಜನರ ನೀರಿನ ಸಮಸ್ಯೆ ಪರಿಹಾರಕ್ಕೆ ಮಹಾರಾಷ್ಟ್ರ ಸರ್ಕಾರ ಸ್ಪಂದಿಸದಿರುವುದು ಹಾಗೂ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿರುವುದರಿಂದ ಜನರ ನೀರಿನ ಬವಣೆ ತೀವ್ರ ಉಲ್ಬಣಗೊಳ್ಳುತ್ತಿದೆ.