ಬಾಗಲಕೋಟೆ: ಇಳಕಲ್ ತಾಲೂಕಿನ ಗುಡೂರ ಗ್ರಾಮದಲ್ಲಿ ಭೋವಿ ವಡ್ಡರ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈಬಿಡದಂತೆ ಸರ್ಕಾರ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಮಹಿಳೆಯರು, ಮಕ್ಕಳು ಪತ್ರ ಚಳುವಳಿ ನಡೆಸಿದ್ದಾರೆ.
ಈಗಾಗಲೇ ಸುಪ್ರೀಂಕೋರ್ಟ್ ಆಯೋಗಕ್ಕೆ ಮೀಸಲಾತಿ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ಭೋವಿ ವಡ್ಡರ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಂತೆ ಆಯೋಗಕ್ಕೆ ವರದಿ ನೀಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡರು.
ಮಹಿಳೆಯರು, ಮಕ್ಕಳು ಸೇರಿದಂತೆ ಭೋವಿ ವಡ್ಡರ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಹಲಕುರ್ಕಿ ನೇತೃತ್ವದಲ್ಲಿ ಅಂಚೆ ಪೆಟ್ಟಿಗೆಗೆ ಪತ್ರ ಹಾಕುವ ಮೂಲಕ ಚಳುವಳಿ ನಡೆಸಲಾಯಿತು.

ಪರಿಶಿಷ್ಟ ಜಾತಿಯ ಮೀಸಲಾತಿಯಿಂದ ತೆಗೆದರೆ ಸರ್ಕಾರದ ಸೌಲಭ್ಯಗಳಿಲ್ಲದೆ ಇನ್ನಷ್ಟು ತೊಂದರೆಪಡುವಂತಹ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಸರ್ಕಾರವು ಆಯೋಗಕ್ಕೆ ಸೂಕ್ತ ವರದಿ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಮಹಾಂತೇಶ ಹಲಕುರ್ಕಿ ಎಚ್ಚರಿಸಿದರು.