ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ದಟ್ಟವಾದ ಅರಣ್ಯುವಿರುವುದಿಲ್ಲ. ಹೀಗಾಗಿ ಬರಡು ಪ್ರದೇಶದಲ್ಲಿ ಚಿರತೆ ಕಂಡು ಬರುವುದಿಲ್ಲ. ಆದರೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ನಾಯಿಯೊಂದರ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕಿರುವ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಜಮಖಂಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ನಿಂಗಪ್ಪ ಹೆಗಡೆಯವರ ಸಾಕು ನಾಯಿ ಮೇಲೆ ಮೇ 27ರಂದು ರಾತ್ರಿ ಚಿರತೆ ದಾಳಿ ಮಾಡಿ ಅರ್ಧ ತಿಂದು ಹಾಕಿ ಹೋಗಿತ್ತು. ಈ ಕುರಿತು ಅರಣ್ಯಾಧಿಕಾರಿಗಳು ಮೇ 28ರಂದು ಚಿರತೆಯ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿ, ಕ್ಯಾಮರಾ ಟ್ರ್ಯಾಕ್ ಮೂಲಕ ಚಿರತೆಯನ್ನು ಪತ್ತೆ ಹಚ್ಚಿದರು.
ಚಿರತೆಗೆ ಸೆರೆಗೆ ಬಲೆ: ತಾಲೂಕಿನಲ್ಲಿ ಪ್ರಥಮವಾಗಿ ಕಾಣಿಸಿಕೊಂಡ ಚಿರತೆಯನ್ನು ಸೆರೆ ಹಿಡಿಯಲು ಬೀಳಗಿ-ಗೋಕಾಕ್-ಭೀಮಗಡದಿಂದ 3 ಬೋನ್ಗಳನ್ನು ತರಿಸಿ ಚಿರತೆ ಬರುವ ಸ್ಥಳಗಳಲ್ಲಿ ಅಳವಡಿಸಿದ್ದಾರೆ.
20 ಜನ ಸಿಬ್ಬಂದಿ ನಿಯೋಜನೆ: ಕುಂಬಾರಹಳ್ಳ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಚುರುಕಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಚಿರತೆಯ ಚಲನವಲನಗಳನ್ನು ಅವಲೋಕಿಸಿ ಸೆರೆ ಹಿಡಿಯುವ ನಿಟ್ಟಿನಲ್ಲಿ ಬೀಳಗಿ, ಮುಧೋಳ, ಜಮಖಂಡಿ ಹಾಗೂ ಬಾಗಲಕೋಟೆ ಅರಣ್ಯ ಇಲಾಖೆಗಳಿಂದ ಸುಮಾರು 15ರಿಂದ 20 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಚಿರತೆ ಸೆರೆ ಹಿಡಿಯುವಂತೆ ಮನವಿ:
ಕುಂಬಾರಹಳ್ಳ ಗ್ರಾಮದಲ್ಲಿ ಚಿರತೆ ನಾಯಿಯನ್ನು ತಿಂದು ಹಾಕಿರುವ ಘಟನೆ ತಾಲೂಕಿನಾದ್ಯಂತ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಗ್ರಾಮಕ್ಕೆ ಹೊಂದಿಕೊಂಡ ಸನಾಳ ಆಲಗೂರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ಮೂಡಿದೆ. ಹಾಗಾಗಿ ಅರಣ್ಯ ಅಧಿಕಾರಿಗಳು ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯಬೇಕು ಎಂದು ಗ್ರಾಮದ ರೈತರು ಒತ್ತಾಯಿಸಿದ್ದಾರೆ.
ಆತಂಕ ಬೇಡ: ಚಿರತೆಯನ್ನು ಹಿಡಿಯಲು ಹಾಗೂ ಅರಣ್ಯ ಪ್ರದೇಶಕ್ಕೆ ವಾಪಸ್ ಕಳಿಸುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಬಾರದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕ ಆನಂದ ನ್ಯಾಮಗೌಡ, ಬಾಗಲಕೋಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಸಂಕಿನಮಠ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ತೇಲಿ, ಆರ್ಎಫ್ಒ ವಿಜಯಕುಮಾರ್ ಕಾಳಪ್ಪನವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.