ಬಾಗಲಕೋಟೆ: ಕೆಲಸ ಅರಿಸಿ ದೂರದ ಮಂಗಳೂರು ಮತ್ತು ಗೋವಾಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ಮತ್ತು ಉತ್ತಮ ಕೂಲಿ ದೊರೆತಿದ್ದು, ಅವರು ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ಕಂಡು ಸಿಇಓ ಗಂಗೂಬಾಯಿ ಮಾನಕರ ಹರ್ಷ ವ್ಯಕ್ತಪಡಿಸಿದರು.
ಬಾದಾಮಿ ತಾಲೂಕಿನ ತೋಗುಣಶಿ ಮತ್ತು ಕೋಟೆಕಲ್ ಗ್ರಾಮದಲ್ಲಿ ಶುಕ್ರವಾರ ಉದ್ಯೋಗ ಖಾತರಿ ಯೋಜನೆಯ ಐಇಸಿ ಕಾರ್ಯಕ್ರಮದಡಿ ಹಮ್ಮಿಕೊಂಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು. ಈ ವೇಳೆ ಕೋಟೆಕಲ್ ಗ್ರಾಮದ ವ್ಯಾಪ್ತಿಯಲ್ಲಿ ನಾಲಾ ಸಂರಕ್ಷಣೆಗಾಗಿ ಹಮ್ಮಿಕೊಂಡ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿದ ಅವರು 250ಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಮಾತನಾಡಿಸಿದರು.
ಕಾರ್ಮಿಕರೊಂದಿಗೆ ಮಾತನಾಡಿದ ಅವರು, ಬೇರೆ ದೂರದ ಊರುಗಳಿಗೆ ಉದ್ಯೋಗ ಅರಿಸಿ ಹೋಗಬೇಡಿ ಸ್ಥಳಿಯವಾಗಿಯೇ ನಿಮಗೆ ಉದ್ಯೋಗ ನೀಡಲಾಗುತ್ತದೆ. ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿದವರಿಗೆ 100 ದಿನ ಹಾಗೂ ಬರಗಾಲದಲ್ಲಿ 150 ದಿನ ಕೂಲಿ ನೀಡಲಾಗುತ್ತಿದೆ. ಯೋಜನೆಯಡಿಯಲ್ಲಿ ದಿನಕ್ಕೆ 249 ರೂ.ಗಳ ಕೂಲಿ ನೀಡಲಾಗುತ್ತದೆ. ಈ ಯೋಜನೆಯ ಮತ್ತೊಂದು ವಿಶೇಷ ಎಂದರೆ ಇದರಲ್ಲಿ ಗಂಡು, ಹೆಣ್ಣು ಎನ್ನದೇ ಸಮಾನ ಕೂಲಿ ನೀಡಲಾಗುತ್ತಿದೆ. ಜೊತೆಗೆ, ದಿವ್ಯಾಂಗರಿಗೆ ಮತ್ತು ಹಿರಿಯ ನಾಗರಿಕರಿಗೆ ಕೆಲಸದಲ್ಲಿ ಶೇ.50 ರಷ್ಟು ರಿಯಾಯಿತಿ ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು.
ತೋಗುಣಶಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಲ್ಲಿಯೂ 350ಕ್ಕೂ ಹೆಚ್ಚು ಜನಕೂಲಿ ಮಾಡುತ್ತಿದ್ದರು. ಕೂಲಿ ಕೆಲಸದಲ್ಲಿ ಹೆಚ್ಚಾಗಿ ಮಹಿಳೆಯರು ಇದ್ದದ್ದನ್ನು ಕಂಡು ಗ್ರಾಮೀಣೋಪಾಯದಡಿ ಸ್ವ-ಸಹಾಯ ಗುಂಪುಗಳಿಗೆ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯಧನ ಸಾಲದ ಸೌಲಭ್ಯಗಳ ಒದಗಿಸಲಾಗುವುದು. ನರೇಗಾದಿಂದ ಕೋಳಿ, ಕುರಿ, ದನದ ತೊಟ್ಟಿ ನಿರ್ಮಾಣ ಹಾಗೂ ಎಸ್ಹೆಚ್ಜೆ ಕಟ್ಟಡಕ್ಕೂ ಅವಕಾಶವಿದೆ. ದುಡಿಯುವ ಕೈಗಳಿಗೆ ಮಾತ್ರವಲ್ಲದೇ ರೈತರಿಗೂ ಸಹ ನರೇಗಾ ವರದಾನವಾಗಿದೆ ಎಂದು ತಿಳಿಸಿದರು.
ನರೇಗಾ, ದುಡಿಯುವ ಕೈಗಳಿಗೆ ಕಲ್ಪವೃಕ್ಷವಾದರೆ ಕೃಷಿಕರಿಗೂ ವರದಾನವಾಗಿದ್ದು, ತಮ್ಮ ಭೂಮಿಯಲ್ಲಿಯೂ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಬಹುದಾಗಿದೆ ಎಂದರು. ಕೃಷಿ ಮತ್ತು ತೋಟಗಾರಿಕೆ ಪ್ರದೇಶ ಅಭಿವೃದ್ದಿಗೆ ನಮ್ಮ ಹೊಲ ನಮ್ಮ ದಾರಿ ನಿರ್ಮಾಣಕ್ಕೂ ನರೇಗಾದಡಿ ಸಾಕಷ್ಟು ಅವಕಾಶಗಳಿವೆ. ಈ ಯೋಜನೆಯ ಲಾಭವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದರು.