ಬಾಗಲಕೋಟೆ: ಸಿದ್ದರಾಮಯ್ಯ ಅಹಿಂದ ಸಮಾವೇಶದ ಕುರಿತು ಬಾಗಲಕೋಟೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಇನ್ನೊಂದು ಸಮಾವೇಶ ಮಾಡ್ತಾರೋ ಬಿಡ್ತಾರೋ ಅದು ಅವರಿಗೆ ಸಂಬಂಧಿಸಿದ್ದು, ಮಾಡಬಾರದು ಅಂತ ನಾನು ಹೇಳೋದಿಲ್ಲ ಎಂದರು.
ಇದೇ ಸಮಯದಲ್ಲಿ ಮಾತನಾಡಿದ ಅವರು, ಕಾಗಿನೆಲೆ ಸ್ವಾಮೀಜಿಗಳು, ಈಶ್ವರಾನಂದ ಪುರಿಶ್ರೀಗಳು ಹೋರಾಟ ಶುರು ಮಾಡಿದರು. ಅವರೆಲ್ಲರೂ ಮುಂಚೆ ಸಿದ್ದರಾಮಯ್ಯ ಮನೆಗೆ ಹೋಗಿದ್ದರು. ಆಗ ಸಿದ್ದರಾಮಯ್ಯ ನಾನು ಬೆಂಬಲ ಕೊಡುತ್ತೇನೆ ಅಂತ ಹೇಳಿದ್ರು ಅಂತ ಸ್ವಾಮೀಜಿಗಳು ನನಗೆ ಹೇಳಿದ್ದಾರೆ. ಅದಾದ ನಂತರ ಎಲ್ಲಾ ಕುರುಬ ಸಮಾಜದ ನಾಯಕರು ನಮ್ಮ ಮನೆಗೆ ಬಂದಿದ್ದರು. ಮೊದಲು ಬೆಂಬಲ ನೀಡಲು ಮುಂದಾದ ಸಿದ್ದರಾಮಯ್ಯ ಮತ್ತೆ ಯಾಕೆ ಡಬಲ್ ಸ್ಟ್ಯಾಂಡ್ ತೆಗೆದುಕೊಂಡರು ಎಂದು ಗೊತ್ತಿಲ್ಲ ಅಂತಾ ಟಾಂಗ್ ನೀಡಿದರು.
ಬಾಗಲಕೋಟೆಯಲ್ಲಿ ಕುರುಬ ಎಸ್ಟಿ ಸಮಾವೇಶ ನಡೆಯಿತು. ಅದಕ್ಕೂ ನನ್ನನ್ನು ಕರೆದಿಲ್ಲ. ಈ ಹೋರಾಟದ ಹಿಂದೆ ಆರ್ಎಸ್ಎಸ್ ಇದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ನಡೆದ ಪಾದಯಾತ್ರೆಗೆ ಆರ್ಎಸ್ಎಸ್ ಹಣ ಕೊಟ್ಟಿದೆ ಎಂದಿದ್ದಾರೆ. ಇದರಿಂದಾಗಿ ಇಡೀ ಸಮುದಾಯಕ್ಕೆ ಭಾರೀ ನೋವಾಗಿದೆ. ಸಮಾವೇಶ ಯಾರೂ ನಿರೀಕ್ಷೆ ಮಾಡದಷ್ಟು ಮಟ್ಟಿಗೆ ಯಶಸ್ವಿಯಾಯಿತು. ಬೆಂಬಲ ಕೊಡುತ್ತೇನೆ ಎಂದ ಸಿದ್ದರಾಮಯ್ಯ, ವಿರೋಧ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಮೀಸಲಾತಿ ಹೋರಾಟ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಮೀಸಲಾತಿ ಹೋರಾಟ ಮಾಡುತ್ತಿರುವ ಸಮಾಜಗಳ ಬಗ್ಗೆ ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ. ಸ್ವಾತಂತ್ರ್ಯ ಬಂದ ನಂತರವೇ ಇದು ಆಗಬೇಕಿತ್ತು. ಸರ್ಕಾರಗಳು ಬಹಳ ಹಿಂದೆಯೇ ಕಾರ್ಯ ಪ್ರವೃತ್ತರಾಗಬೇಕಿತ್ತು ಎಂದರು.
ಸಚಿವ ಸಂಪುಟದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಮುಖಾಂತರ ವರದಿ ಪಡೆಯುವ ತೀರ್ಮಾನ ತೆಗೆದುಕೊಂಡಿದ್ದೇವೆ. ಹಿಂದುಳಿದ ವರ್ಗದ ಆಯೋಗದ ವರದಿ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಇನ್ನು ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಅವರು ಬಿಎಸ್ವೈ ಹಾಗೂ ಸರ್ಕಾರದ ವಿರೋದ್ಧ ಹೇಳಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.