ಬಾಗಲಕೋಟೆ : ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ದಾಳಿ ನಡೆಸಿ ನಿಯಮ ಉಲ್ಲಂಘನೆ ಆರೋಪದಡಿ ದಂಡ ವಿಧಿಸಿ ಪ್ರಕರಣ ದಾಖಲಿಸಲಾಗಿದೆ.
ಬೀಳಗಿ ನಗರದಲ್ಲಿ ತಂಬಾಕು ಉತ್ಪನ್ನಗಳ ಸಗಟು ಹಾಗೂ ಚಿಲ್ಲರೆ ಮಾರಾಟಗಾರರ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ದಾಳಿ ನಡೆಸಿದ್ದು, ದಾಳಿಯಲ್ಲಿ ನಿಯಮ ಉಲ್ಲಂಘನೆ ಕಂಡು ಬಂದ ಹಿನ್ನಲೆಯಲ್ಲಿ ಕೋಪ್ಟಾ ಕಾಯ್ದೆ-2003ರ ಸೆಕ್ಷನ್ 4 ಮತ್ತು 6ರಡಿ ಒಟ್ಟು 22 ಪ್ರಕರಣಗಳನ್ನು ದಾಖಲಿಸುವುದರ ಜೊತೆಗೆ ಒಟ್ಟು 25 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.
ತಂಬಾಕು ಉತ್ಪನ್ನ ಮಾರಾಟಗಾರರಿಗೆ ತಮ್ಮ ಅಂಗಡಿಗಳಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧ ಫಲಕಗಳನ್ನು ಹಾಕಬೇಕು. ಸೀಗರೇಟ್, ಬೀಡಿಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡಬಾರದು. ಗೋಡೆ ಬರಹ, ಹೋರ್ಡಿಂಗ್ಸ್ , ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಮೂಲಕ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡಬಾರದು ಎಂದು ಕರಪತ್ರ ನೀಡುವ ಮೂಲಕ ಸೂಚಿಸಲಾಗಿದೆ.
ಸೆಕ್ಷನ್ 6 (ಬಿ) ಕಾಯ್ದೆ ಅನುಸಾರ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಉಲ್ಲಂಘನೆ ಆದಲ್ಲಿ ದಂಡ ಹಾಗೂ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.