ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜನತೆ ತಮ್ಮ ಎತ್ತುಗಳಿಗೆ ಮೈ ತೊಳೆದು ಶೃಂಗಾರ ಮಾಡಿ ಮನೆ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ಎತ್ತುಗಳಿಗೆ ಶೃಂಗಾರದ ಜೊತೆಗೆ ಸಾಮಾಜಿಕ ಕಳಕಳಿ ಮೂಡಿಸುವ ಬರಹ ಬರೆದು ಗಮನ ಸೆಳೆಯಲಾಯಿತು.
ಇಳಕಲ್ಲ ಪಟ್ಟಣದ ಕಿಲ್ಲಾ ಓಣಿಯ ಪ್ರಮುಖರಾದ ಎಂ.ಎಸ್.ಪಾಟೀಲ, ಮಹೇಶ ಪಾಟೀಲ, ಬಸವನಗೌಡ ಪಾಟೀಲ, ಮುತ್ತಣ್ಣ ಮಾಗಿ, ಮಹಾಂತೇಶ ಹೊಳಿ ಸೇರಿದಂತೆ ಇತರರ ಸಮ್ಮುಖದಲ್ಲಿ ಎತ್ತುಗಳನ್ನು ಓಡಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಕೈ ಬಿಡಬೇಕು. ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ ಮಾಡಬೇಕು. ಗೋ ರಕ್ಷಕ ಶಿವು ಉಪ್ಪಾರ ಭಾವಚಿತ್ರ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಬರಹ ಬರೆದು ಗಮನ ಸೆಳೆದರು.
ಬಳಿಕ ಕರಿ ಹರಿಯುವ ಸ್ಪರ್ಧೆ ನಡೆಸಲಾಯಿತು. ಕರಿ ಹರಿಯುವ ಸಮಯದಲ್ಲಿ ಸೇರಿದ ಜನತೆ ಇಂತಹ ಬರಹ ನೋಡಿ ಖುಷಿ ಪಡುವ ಜೊತೆಗೆ ಈ ಸಾಮಾಜಿಕ ಕಳಕಳಿಯನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.