ಬಾಗಲಕೋಟೆ: ಬಾದಾಮಿ ತಾಲೂಕಿನ ನೆರೆ ಪೀಡಿತ ಪ್ರದೇಶಕ್ಕೆ ಬೆಂಗಳೂರಿನ ಕಾರ್ಗಿಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಿಬ್ಬಂದಿ ಭೇಟಿ ನೀಡಿ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಮಕ್ಕಳಿಗೆ ವಿತರಣೆ ಮಾಡಿದರು.

ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿ ಸಂತ್ರಸ್ತರಿಗೆ ಪುಸ್ತಕ ಸೇರಿದಂತೆ ಇತರ ವಸ್ತುಗಳ ವಿತರಣೆ ಮಾಡಿದರು.
ಗ್ರಾಮದ ಸಂತ್ರಸ್ತರ ಮಕ್ಕಳಿಗೆ ಹಾಗೂ ಕಿತ್ತೂರು ಚನ್ನಮ್ಮ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿ ನಂತರ ಮಾತನಾಡಿದ ಶ್ರೀಗಳು, ನೆರೆ ಬಂದು ಸಾಕಷ್ಟು ತೊಂದರೆ ಆಗಿದೆ. ಮಕ್ಕಳ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಗಿಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸ್ಥಳೀಯ ಮಕ್ಕಳಿಗೆ ಹಾಗೂ ಕಿತ್ತೂರ ಚನ್ನಮ್ಮ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಗಿದ್ದು, ಮಕ್ಕಳು ಶಿಕ್ಷಣದಲ್ಲಿ ಹಿಂದೆ ಬೀಳದೆ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.