ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ಭದ್ರ ನೆಲೆ ಇಲ್ಲದೇ ಸೊರಗುವಂತಾಗಿದೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದಲ್ಲಿ ತಮ್ಮ ನೆಲೆ ಸ್ಥಾಪಿಸಲು ಮುಂದಾಗಿದ್ದಾರೆ.
ಜನವರಿ 31 ರಂದು ಬಾಗಲಕೋಟೆ ನಗರಕ್ಕೆ ಹೆಚ್ಡಿಕೆ ಆಗಮಿಸಲಿದ್ದು, ಜೆಡಿಎಸ್ ಪಕ್ಷ ಸಂಘಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹೆಸರಿಗೆ ಮಾತ್ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ. ಆದರೆ, ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಹಾಗೂ ಮುಂಬೈ ಕರ್ನಾಟಕದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಜನಾಂಗದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಬಾದಾಮಿ ಮತಕ್ಷೇತ್ರದಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧೆ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಹನಮಂತ ಮಾವಿನ ಮರದ ಭಯ ಹುಟ್ಟಿಸಿದ್ದರು. ಸಿದ್ದರಾಯ್ಯ ಸ್ಪರ್ಧೆ ಮಾಡದೇ ಇದ್ದಲ್ಲಿ ಅಂದು ಜೆಡಿಎಸ್ನ ಹನಮಂತ ಮಾವಿನ ಮರದ ಗೆಲವು ಸುಲಭವಾಗಿತ್ತು ಎಂದು ವಿಶ್ಲೇಷಣೆ ಸಹ ಮಾಡಲಾಗಿತ್ತು. ಈ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡರಿಗೆ ಮಾವಿನ ಮರದ ಆತ್ಮೀಯರಾಗಿದ್ದಾರೆ.
ಇನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಶಾಸಕರಾದ ಎಂ.ಸಿ.ಮನಗೊಳಿ ಅವರು ನಿಧನದಿಂದ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಉಂಟಾಗಿದೆ. ಈಗ ಅವಳಿ ಜಿಲ್ಲೆ ಸೇರಿದಂತೆ ಮುಂಬೈ ಕರ್ನಾಟಕದಲ್ಲಿ ಪಕ್ಷ ಬಲಿಷ್ಠಗೊಳಿಸಲು ಮುಂದಾಗಿದ್ದಾರೆ. ದಕ್ಷಿಣ ಭಾಗದಲ್ಲಿ ಕೆಲವರು ಪಕ್ಷ ಬಿಟ್ಟು ಹೋಗಿರುವುದು ಪಕ್ಷಕ್ಕೆ ಹಿನ್ನಡೆ ಆಗಿದ್ದರೂ, ಅದನ್ನು ಉತ್ತರ ಕರ್ನಾಟಕದಲ್ಲಿ ಸರಿಪಡಿಸಲು ಮುಂದಾಗಿದ್ದರೆ. ಈ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಬರಲಿದ್ದು, ಅದರ ತಯಾರಿ ನಡೆಸುತ್ತಿದ್ದಾರೆ. ಜೊತೆಗೆ ಇನ್ನು ಎರಡೂವರೆ ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರುವ ಹಿನ್ನೆಲೆ ಈಗಲೇ ಈ ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡಲಾಗುತ್ತಿದೆ.
ಜಾತಿ ಆಧಾರದ ಮೇಲೆ ನೋಡುವುದಾದರೆ ಬಾದಾಮಿಯಲ್ಲಿ ಲಿಂಗಾಯತರು ಹಾಗೂ ಯುವಕರು ಹೆಚ್ಚು ಇರುವುದರಿಂದ ಮಾವಿನಮರದ ಅವರಿಗೆ ಅನುಕೂಲಕರ ವಾತಾವರಣ ಇದೆ ಎಂಬುದು ಜೆಡಿಎಸ್ ಪಕ್ಷದ ವರಿಷ್ಠರು ಮನಗೊಂಡಿದ್ದಾರೆ. ಇದರ ಜೊತೆಗೆ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕೊಪ್ಪಳ ಹಾಗೂ ಗದಗ ಜಿಲ್ಲೆಯಲ್ಲಿ ಈ ಬಾರಿ ಪಕ್ಷ ಸಂಘಟನೆ ಮಾಡಿ ಕನಿಷ್ಠ ಐದು ಸ್ಥಾನ ಗೆಲ್ಲಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಈ ಮೂಲಕ ದಕ್ಷಿಣದಲ್ಲಿ ಕಳೆದು ಕೊಂಡಿರುವುದು ಉತ್ತರದಲ್ಲಿ ಪಡೆದುಕೊಳ್ಳಲು ಈಗಾಗಲೇ ರಣತಂತ್ರ ರೂಪಿಸಿದ್ದು, ಮುಂದೆ ಯಾವುದೇ ಪಕ್ಷಕ್ಕೆ ಬಹುಮತ ಇಲ್ಲವಾದರೆ ಮತ್ತೆ ಕಿಂಗ್ ಮೇಕರ್ ಆಗಬೇಕು ಎಂಬ ಮಹದಾಸೆ ಹೊಂದಿದ್ದಾರೆ.
ಜನವರಿ 31 ರಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖ ಮುಖಂಡರು ಬಾಗಲಕೋಟೆಗೆ ಆಗಮಿಸಿ, ಪಕ್ಷದ ಸಂಘಟನೆಗೆ ಒತ್ತು ನೀಡಲಿದ್ದಾರೆ. ಬಿಜೆಪಿ, ಕಾಂಗ್ರೆಸ್ ಕೋಟೆಯನ್ನು ಛೇದಿಸಿ, ಜೆಡಿಎಸ್ ಪಕ್ಷದ ಸಾಮ್ರಾಜ್ಯವನ್ನು ಸ್ಥಾಪಿಸಲು ಮುಂದಾಗಿದ್ದು, ಎಷ್ಟರ ಮಟ್ಟಿಗೆ ಯಶಸ್ಸು ಹೊಂದುತ್ತಾರೆ ಎಂಬುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆ.