ಬಾಗಲಕೋಟೆ: ಜಮಖಂಡಿ ನಗರಸಭೆ ನೂತನ ಅಧ್ಯಕ್ಷರಾಗಿ ಸಿದ್ದು ಮೀಶಿ (7ನೇ ವಾರ್ಡ್) ಹಾಗೂ ಉಪಾಧ್ಯಕ್ಷೆಯಾಗಿ ಮಲ್ಲವ್ವ ಪಾಯಗೊಂಡ (2ನೇ ವಾರ್ಡ್) ಅವರು ಮಂಗಳವಾರ ಅವಿರೋಧ ಆಯ್ಕೆಯಾದರು.
31 ಸದಸ್ಯರ ಬಲದ ಜಮಖಂಡಿ ನಗರಸಭೆಯಲ್ಲಿ 23 ಸದಸ್ಯರು, ಪಕ್ಷೇತರ ಸದಸ್ಯ ಹಾಗೂ ಶಾಸಕ ಒಳಗೊಂಡ ಕಾಂಗ್ರೆಸ್ ಸಂಪೂರ್ಣ ಬಹುಮತ ಹೊಂದಿದೆ. ಹೀಗಾಗಿ ನಿರೀಕ್ಷೆಯಂತೆ ಪಕ್ಷದ ಸದಸ್ಯ ಸಿದ್ದು ಮೀಶಿ ಸುಲಭವಾಗಿ ಅಧ್ಯಕ್ಷ ಸ್ಥಾನ ಪಡೆದರು.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ 30ನೇ ವಾರ್ಡ್‌ನ ಸದಸ್ಯ ಕುಶಾಲ ವಾಗಮೋರೆ ಮತ್ತು ಉಪಾಧ್ಯಕ್ಷೆ ಸ್ಥಾನಕ್ಕೆ 19ನೇ ವಾರ್ಡ್ ಸದಸ್ಯೆ ಮಹಾನಂದಾ ಕಲೂತಿ ಪ್ರತಿಸ್ಪರ್ಧಿಯಾಗಿದ್ದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ, ಉಪಾಧ್ಯಕ್ಷೆ ಸ್ಥಾನವನ್ನು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಿಡಲಾಗಿತ್ತು.
ನಗರಸಭೆ ಪೌರಾಯುಕ್ತ ರಾಮಕೃಷ್ಣ ಸಿದ್ದನಕೋಳ್ಳ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷೆಯನ್ನು ಅಭಿನಂದಿಸಿ ಸನ್ಮಾನಿಸಿದರು. ಶಾಸಕ ಆನಂದ ನ್ಯಾಮಗೌಡ ಕೂಡ ಅಭಿನಂದಿಸಿದರು. ಸಿದ್ದು ಮೀಶಿ ಹಾಗೂ ಮಲ್ಲವ್ವ ಪಾಯಗೊಂಡ ಬೆಂಬಲಿಗರು ನಗರಸಭೆ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ದಾನೇಶ ಘಾಟಗೆ ಕೂಡ ಆಕಾಂಕ್ಷಿಯಾಗಿದ್ದ. ಹೀಗಾಗಿ, ಶಾಸಕ ಆನಂದ ನ್ಯಾಮಗೌಡ ಹಾಗೂ ಕಾಂಗ್ರೆಸ್ ಹಿರಿಯರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಸಿದ್ದು ಮೀಶಿ ಮತ್ತು ದಾನೇಶ ಅವರಿಗೆ ತಲಾ 15 ತಿಂಗಳ ಅವಧಿಯನ್ನು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.