ಬಾಗಲಕೋಟೆ: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗಾಗಿ ಅಕ್ಟೋಬರ್ 21ರಂದು ಚುನಾವಣೆ ನಿಗದಿಪಡಿಸಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ನಗರಸಭೆ ಸಭಾಭವನದಲ್ಲಿ ಚುನಾವಣೆ ನಡೆಯಲಿದೆ. ಅಂದು ಮುಂಜಾನೆ 10 ರಿಂದ 11 ಗಂಟೆಯವರೆಗೆ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರಗಳನ್ನು ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಗುತ್ತಿದ್ದಂತೆಯೇ ಪರಿಶೀಲನೆ ಮಾಡಲಾಗುವುದು.
ನಾಮನಿರ್ದೇಶನ ಹಿಂತೆಗೆದುಕೊಳ್ಳಲು ನಿಗದಿಪಡಿಸಿದ ಅವಧಿ ಮುಕ್ತಾಯವಾದ ನಂತರ ಚುನಾವಣೆ ನಡೆಸಬೇಕಾದಲ್ಲಿ ಕೋರಂ ಗಣನೆಗೆ ತೆಗೆದುಕೊಂಡು ಜಮಖಂಡಿ ನಗರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಚೀಟಿ ಎತ್ತುವ ಮೂಲಕ ಮತದಾನ ನಡೆಸಲಾಗುವುದು ಎಂದು ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳಿ ಅವರು ತಿಳಿಸಿದ್ದಾರೆ.
ಜಮಖಂಡಿ ನಗರಸಭೆ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾತಿ ಪ್ರಕಟಿಸಲಾಗಿದೆ. ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದು, ಸಿದ್ದು ಮೀಶಿ ಮತ್ತು ದಾನೇಶ ಘಾಟಗೆ ಎಂಬುವವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ.
ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿರುವುದರಿಂದ ಇದನ್ನು ಅಲ್ಪಸಂಖ್ಯಾತರ ಸದಸ್ಯರಿಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಶ್ರೀಮತಿ ಫಾತಿಮಾ ಜಮಾದಾರ, ಜಮೀಳಾ ಜನವಾಡ, ಆಸುರಬಿ ಪಕಾಲಿ, ಸಾರಾಬಿ ಶಿರೋಳ ಎಂಬುವರು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಯಾರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಬೇಕು ಎಂಬುದನ್ನು ಶಾಸಕ ಆನಂದ ನ್ಯಾಮಗೌಡ ಅಂತಿಮಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ.