ಬಾಗಲಕೋಟೆ: ನಾವು ಯಾವ ಪಕ್ಷದೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ, ಈಗಾಗಲೇ ಇತರೆ ರಾಜ್ಯಗಳಲ್ಲಿ ಸ್ವತಂತ್ರವಾಗಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಕರ್ನಾಟಕದಲ್ಲಿಯೂ ಸಹ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಯಾವುದೇ ಪಕ್ಷದ ಜೊತೆ ಒಳ ಒಪ್ಪಂದ, ಹೊರ ಒಪ್ಪಂದ ಮಾಡಿಕೊಳ್ಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ವಿಜಯೇಂದ್ರ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ: ಬಾಗಲಕೋಟೆಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಒಂದು ಪಕ್ಷವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ವಿರುದ್ಧ ಗೆಲ್ಲಲು ಹೋರಾಟ ಮಾಡುತ್ತೇವೆ. ಅದರಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧವೂ ಫೈಟ್ ಮಾಡುತ್ತೇವೆ. ಎಲ್ಲೆಲ್ಲಿ ರಾಜ್ಯಮಟ್ಟದ ನಾಯಕರು ಇರುತ್ತಾರೋ ಆ ಕ್ಷೇತ್ರದ ಬಗ್ಗೆ ಚರ್ಚೆಗಳು ನಡೆಯುತ್ತವೆ. ವರುಣಾದಲ್ಲಿ ಮಾಡುವ ಬಗ್ಗೆ ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ ಎಂದರು.
ಇದನ್ನೂ ಓದಿ:ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಒಳ ಒಪ್ಪಂದ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ
ನಾನು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಹೋಗಿ ಬಂದಿದ್ದೇನೆ. ವಿಶೇಷವಾಗಿ ಕಾರವಾರ ಜಿಲ್ಲೆಗೆ ಹೋಗಿ ಬಂದೆ. ಎಲ್ಲ ಕಡೆ ನಾನು ನೋಡಿದ ಹಾಗೆ ಪ್ರತಿಯೊಂದು ರೋಡ್ ಶೋನಲ್ಲಿ 15 ರಿಂದ 20 ಸಾವಿರ ಯುವಕರು ಇದ್ದರು, ಬಸವಕಲ್ಯಾಣದಲ್ಲಿ ನಡೆದಿದ್ದ ಅಮಿತ್ ಶಾ ಅವರ ಕಾರ್ಯಕ್ರದಲ್ಲಿ 50 ಸಾವಿರ ಜನರಿದ್ದರು. ಹುಮನಾಬಾದ್ ಸಂಘಟನೆಯಲ್ಲಿ ರಾಜಕೀಯವಾಗಿ ಅತ್ಯಂತ ದುರ್ಬಲವಾಗಿದೆ. ಅಲ್ಲಿಯೂ ಸಹ 15 ರಿಂದ 20 ಸಾವಿರ ಜನ ಸೇರಿದ್ದು. ಜನರ ಬೆಂಬಲ ಬಿಜೆಪಿ ಪರವಾಗಿ ಇದೆ. ನಾವು ಪ್ರವಾಸ ಮಾಡಿರುವ ರಾಯಚೂರು, ಕಲ್ಬುರ್ಗಿ ಸೇರಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಜನ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ರಾಜ್ಯ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಈ ಚುನಾವಣೆಯಲ್ಲಿ ಮ್ಯಾಜಿಕ್ ಸಂಖ್ಯೆ ಮೀರಿ 140 ಸ್ಥಾನಗಳಿಸುತ್ತೇವೆ ಎಂಬ ವಿಶ್ವಾಸ ಇದೆ ಎಂದರು.
ಕಾಂಗ್ರೆಸ್ ರಾಷ್ಟ್ರದಲ್ಲಿ ಮುಳುಗುವ ಹಡಗಾಗಿದೆ-ಜಗದೀಶ ಶೆಟ್ಟರ್: ಈಗಾಗಲೇ ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಮುಗಿದು ಹೋದ ಅಧ್ಯಾಯವಾಗಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ಅನ್ನು ದುರ್ಬಿನು ಹಿಡಿದುಕೊಂಡು ನೋಡುವಂತ ಪರಿಸ್ಥಿತಿ ಇದೆ. ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಅಲ್ಲಿ ಬಿಜೆಪಿ ಗೆಲವು ಸಾಧಿಸಿ ತಳವೂರಿದೆ. ಆದ್ದರಿಂದ ಕಾಂಗ್ರೆಸ್ ರಾಷ್ಟ್ರದಲ್ಲಿ ಮುಳುಗುವ ಹಡಗಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಐಸಿಯುನಲ್ಲಿದೆ. ಅದನ್ನು ಬದುಕಿಸಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ ಅವರು ಪ್ರಯತ್ನಿಸುತ್ತಿದ್ದಾರೆಂದು ಎಂದು ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.
ಇದನ್ನೂ ಓದಿ:ರಾಜ್ಯ ಕಾಂಗ್ರೆಸ್ ನಾಯಕರ ಮನೆ ಮುಂದೆ ಮುಖಂಡರು ಕಾರ್ಯಕರ್ತರ ಹೈಡ್ರಾಮ: ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ