ಬಾಗಲಕೋಟೆ : ಅಕ್ರಮವಾಗಿ ಸರಾಯಿ ಮಾರಾಟ ಸೇರಿದಂತೆ ಚಿಕ್ಕ ಮಕ್ಕಳನ್ನು ವೇಟರ್ ಕೆಲಸಕ್ಕೆ ನೇಮಿಸಿರುವುದು ಜಿಲ್ಲೆಯ ಮುಧೋಳ ಹಾಗೂ ರಬಕವಿ-ಬನ್ನಹಟ್ಟಿ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರವಾಗಿರುವ ಮುಧೋಳ ತಾಲೂಕಿನ ನಾಗರಾಳ ಗ್ರಾಮದಲ್ಲಿ ಚಹಾದ ಹೋಟೆಲ್‌ವೊಂದರಲ್ಲಿ ಮಹಿಳೆಯರು, ಮಕ್ಕಳು ಸಾರಾಯಿ ಮಾರಾಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಅಬಕಾರಿ ನಿಯಮದ ಪ್ರಕಾರ, ಪರವಾನಿಗೆ ಇಲ್ಲದೆ ಯಾವುದೇ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುವಂತ್ತಿಲ್ಲ. ಅಲ್ಲದೇ ಚಿಕ್ಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಆದರೆ, ಇಲ್ಲಿ ಕಾನೂನುಗಳನ್ನು ಗಾಳಿಗೆ ತೂರಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಮದ್ಯದ ಅಂಗಡಿಗಳು ಇರುವುದಿಲ್ಲ. ಹೀಗಾಗಿ ಮುಧೋಳ ಪಟ್ಟಣದಿಂದ ಬಾಕ್ಸ್ ಗಟ್ಟಲೆ ಮದ್ಯ ತೆಗೆದುಕೊಂಡು ಬಂದು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರಬಕವಿ ಬನಹಟ್ಟಿ ತಾಲೂಕಿನ ಡವಳೇಶ್ವರ ಗ್ರಾಮ ಡಾಭಾವೊಂದರಲ್ಲಿ ಸಹ ಸಾರಾಯಿ ಹಾಗೂ ಸಿಗರೇಟ್ ನೀಡುವುದಕ್ಕೆ ಮಕ್ಕಳನ್ನು ನೇಮಿಸಿಕೊಳ್ಳಲಾಗಿದೆ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಕ್ಷೇತ್ರದಲ್ಲಿಯೇ ಹೀಗೆ ನಡೆಯುತ್ತಿದ್ದರೆ, ಇನ್ನುಳಿದ ಪ್ರದೇಶದಲ್ಲಿ ಪರಿಸ್ಥಿತಿ ಹೇಗೆ? ಎಂಬುದೇ ಪ್ರಶ್ನೆಯಾಗಿದೆ.
ಈ ಬಗ್ಗೆ ಮಾರಾಟ ಮಾಡುವವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಪ್ರತಿ ತಿಂಗಳು ಲಂಚ್ ನೀಡುತ್ತೇವೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಸಹಕಾರ ಇಲ್ಲದೆ ಹೀಗೆ ಗ್ರಾಮೀಣ ಪ್ರದೇಶದಲ್ಲಿ ಮಾರಾಟ ಮಾಡುವುದು ಸಾಧ್ಯವೇ ಇಲ್ಲ ಎಂಬುವುದು ಸಾರ್ವಜನಿಕರ ಅಭಿಪ್ರಾಯ.