ಬಾಗಲಕೋಟೆ : ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಈಗ ಚರ್ಚೆ ನಡೆಯುತ್ತಿದೆ. ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಪಟ್ಟು ಹಿಡಿದಿದ್ದಾರೆ. ಈ ಬೆನ್ನಲ್ಲೇ ಸಿದ್ದರಾಮಯ್ಯನವರ ಜತೆಗೆ ಜನತಾ ಪರಿವಾರದಿಂದಲೂ ಆಪ್ತ ಬಳಗದಲ್ಲಿರುವ ಮಾಜಿ ಸಚಿವ ಹೆಚ್ ವೈ ಮೇಟಿ ಪ್ರತಿಕ್ರಿಯೆ ನೀಡಿ, ತಮ್ಮ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ತಮ್ಮ ರಾಜಕೀಯ ಗುರುವಿಗೆ ಆಹ್ವಾನ ನೀಡಿದ್ದಾರೆ.
ನಗರದಲ್ಲಿ ಮಾಜಿ ಸಚಿವ ಹೆಚ್ ವೈ ಮೇಟಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಬಾಗಲಕೋಟೆ ಕ್ಷೇತ್ರಕ್ಕೆ ಬಂದ್ರೂ ಸ್ವಾಗತ ಮಾಡ್ತೇನೆ. ಅವರಿಗಾಗಿ ಕ್ಷೇತ್ರ ಬಿಟ್ಟು ಕೊಡ್ತೇನೆ. ಇಷ್ಟೆಲ್ಲ ರಾಜಕೀಯವಾಗಿ ನಾನು ಬೆಳದಿದ್ದೇ ಅವರಿಂದ, ಅವರಿಗೆ ಬಿಟ್ಟಕೊಡಲಿಲ್ಲ ಅಂದ್ರೆ ಹೇಗೆ ಎಂದು ಮೇಟಿ ತಿಳಿಸಿದರು.
ರಾಜ್ಯದಲ್ಲಿ ನನ್ನ ಗುರುತಿಸಿದ್ದೆ ಅವರು, ನಾಲ್ಕು ಸಲ ಶಾಸಕ, ಒಂದು ಬಾರಿ ಎಂಪಿ ಆಗಬೇಕಾದರೆ ಸಿದ್ದರಾಮಯ್ಯ ಅವರೇ ಕಾರಣ. ರಾಜ್ಯದ ಎಲ್ಲ ಕ್ಷೇತ್ರದ ಕಾಂಗ್ರೆಸ್ ಸದಸ್ಯರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ಸಿದ್ಧರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ನನ್ನ ಬಾಗಲಕೋಟೆ ಕ್ಷೇತ್ರಕ್ಕೆ ಆಹ್ವಾನ ನೀಡಿದ್ದೆ.
ನಾನು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟು ಕೊಡಲು ರೆಡಿಯಾಗಿದ್ದೆ. ಎಲ್ಲರೂ ಅವರನ್ನ ಕರೆಯುತ್ತಾರೆ. ಅವರು ಎಲ್ಲಿ ನಿಲ್ಲಬೇಕು ಅಂತ ಅವರೇ ನಿರ್ಧಾರ ಮಾಡ್ತಾರೆ. ಈಗ ಬಾದಾಮಿ ಕ್ಷೇತ್ರದಲ್ಲಿದ್ದೇನೆ, ಅಲ್ಲೇ ಇರ್ತಿನಿ ಅಂತ ಹೇಳಿದ್ದಾರೆ. ಸಾಹೇಬ್ರು ಗುಟ್ಟು ಬಿಟ್ಟುಕೊಟ್ಟಿಲ್ಲ. ಈಗ ಸದ್ಯ ಬಾದಾಮಿಯಲ್ಲಿ ಇದ್ದೀನಿ ಮುಂದೆ ನೋಡೋಣ ಅಂದಿದ್ದಾರೆ ಎಂದು ಮೇಟಿ ಹೇಳಿದರು. (ಚಾಮರಾಜಪೇಟೆಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸಿದ್ದರಾಮಯ್ಯ)
ಸಿದ್ದರಾಮಯ್ಯ ಅವರ ಬಗ್ಗೆ ಏನೂ ಹೇಳಲಿಕ್ಕೆ ಆಗಲ್ಲ. ಬಾದಾಮಿ ಅಂತಾನು ಹೇಳಲ್ಲ, ಚಾಮರಾಜಪೇಟೆ ಅಂತಾನೂ ಹೇಳೋಕಾಗಲ್ಲ. ಅದು ಸಿದ್ದರಾಮಯ್ಯ ಅವರಿಗೆ ಬಿಟ್ಟದ್ದು ಎಂದು ಹೇಳುವ ಮೂಲಕ ತಾವು ಗುರುವಿಗಾಗಿ ಕ್ಷೇತ್ರ ಬಿಡಲು ಸಿದ್ಧ ಎಂದು ಮೇಟಿ ತಿಳಿಸಿದರು.