ಬಾಗಲಕೋಟೆ: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ಬಾಗಲಕೋಟೆ ನಗರದಲ್ಲಿ ಬೃಹತ್ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಬಿಲ್ಡ್ ಟೆಕ್ -2019 ನಡೆಯಿತು.
ವಿದ್ಯಾಗಿರಿಯ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭಕ್ಕೆ ಸಂಸದರಾದ ಪಿ ಸಿ ಗದ್ದಿಗೌಡರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಸಜ್ಜಿತವಾದ ಕಟ್ಟಡ ನಿರ್ಮಾಣಕ್ಕೆ ಬೇಕಾಗುವಂತಹ ಹಲವಾರು ಸಾಮಗ್ರಿಗಳು ಸಿಗುತ್ತದೆ. ಆದರೆ, ಗುಣಮಟ್ಟದ ಕಡಿಮೆ ಬೆಲೆಗೆ ದೂರಕುವಂತ ಸರಕುಗಳನ್ನು ಗ್ರಾಹಕರು ಖರೀದಿಸುತ್ತಾರೆ. ಗ್ರಾಹಕರಿಗೆ ಅನುಕೂಲಕರವಾದ ಇಂತಹ ಮೇಳವನ್ನು ಹಮ್ಮಿಕೊಳ್ಳುವುದು ಅಗತ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅಭಿಯಂತರ ಅಶೋಕ ವಾಸದ ಮಾತನಾಡಿ, ಪ್ರತಿಯೊಬ್ಬರೂ ಸುಂದರ ಮನೆ ಕಟ್ಟುವ ಆಸೆ ಹೊಂದಿರುತ್ತಾರೆ. ಇಂತಹ ಮೇಳದಲ್ಲಿ ಸಾಮಾನ್ಯ ಜನರಿಗೂ ಅನುಕೂಲಕರವಾಗುವಂತಹ ವಾತಾವರಣ ಸೃಷ್ಟಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಿವಿಲ್ ಎಂಜಿನಿಯರ್ ಸಂಘಟನೆ ವತಿಯಿಂದ ಆಯೋಜಿಸಿರುವ ಈ ಮೇಳವು ಮೂರು ದಿನಗಳ ಕಾಲ ನಡೆಯಲಿದೆ. ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಇದಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ. ರಾಜ್ಯದ ವಿವಿಧ ಪ್ರದೇಶಗಳಿಂದ ಕಂಪನಿಗಳು ಆಗಮಿಸಿದ್ದು, ಸುಮಾರು ನೂರಕ್ಕೂ ಅಧಿಕ ಮಳಿಗೆಗಳಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.