ಬಾಗಲಕೋಟೆ : ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಮಿನಿ ಸ್ಮಾರಕ ಕಟ್ಟಿ ಬಾದಾಮಿ ತಾಲೂಕಿನ ಹೊಸೂರು ಗ್ರಾಮಸ್ಥರು ಗಮನ ಸೆಳೆದಿದ್ದಾರೆ. ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರು, ಯುವಕ ಮಂಡಳಿ, ಗ್ರಾಮಸ್ಥರು ಸೇರಿಕೊಂಡು ಅಪ್ಪು ಸ್ಮರಣಾರ್ಥವಾಗಿ ಈ ಸ್ಮಾರಕ ನಿರ್ಮಿಸಿದ್ದಾರೆ.
ಸ್ಮಾರಕದಲ್ಲಿ ಅಪ್ಪು ಭಾವಚಿತ್ರ ಇಡಲಾಗಿದೆ. ಅದರ ಕೆಳಗೆ 'ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಪುನೀತ್ ರಾಜಕುಮಾರ್' ಎಂಬ ಸಾಲುಗಳನ್ನು ಬರೆಯಲಾಗಿದೆ. ಸ್ಮಾರಕವನ್ನು ಹೂವಿನಿಂದ ಅಲಂಕಾರಗೊಳಿಸಿ ಮೇಣದ ದೀಪ ಹಚ್ಚಿ ಗೌರವ ಸಲ್ಲಿಸಿದ್ದಾರೆ.
ಶಾಲಾಮಕ್ಕಳಿಂದ ಅಪ್ಪು ಗಾಯನ ಕಾರ್ಯಕ್ರಮ, ಅನ್ನಸಂತರ್ಪಣೆ ಮಾಡಿದ್ದಾರೆ. ಗ್ರಾಮದ ಮಾರುಕಟ್ಟೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಮಾರುಕಟ್ಟೆಗೂ ಸಹ ಪುನೀತ್ ಹೆಸರು ನಾಮಕರಣ ಮಾಡಲಾಗಿದೆ.