ಬಾಗಲಕೋಟೆ: ಕಳೆದ ಮೂರು ತಿಂಗಳಿನಿಂದಲೂ ಪ್ರವಾಹ, ಮಳೆಯಿಂದಾಗಿ ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಅಂದಾಜು 3 ಕೋಟಿ ರೂ. ನಷ್ಟವಾಗಿದೆ.
ಆಗಸ್ಟ್ನಿಂದ ಇಲ್ಲಿಯವರೆಗೆ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಮಳೆ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಈರುಳ್ಳಿ ಸಂಪೂರ್ಣ ನಾಶವಾಗಿ ಕೊಳತು ಹೋಗಿದೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿರುವ ಹಿನ್ನೆಲೆ, ಬಾಗಲಕೋಟೆ ನಗರದ ಸಮೀಪ ಯಳ್ಳಿಗುತ್ತಿ ಎಂಬಲ್ಲಿ ಬೆಳೆದ ಈರುಳ್ಳಿ ಬೆಳೆ ಟ್ರ್ಯಾಕ್ಟರ್ ಹಾಯಿಸಿ, ಅಲ್ಲಿಯೇ ಗೊಬ್ಬರ ಮಾಡಲು ರೈತರು ಮುಂದಾಗಿದ್ದಾರೆ.
ತೋಟಗಾರಿಕೆ ಇಲಾಖೆಯ ಪ್ರಕಾರ ಒಂದು ಹೆಕ್ಟೇರ್ಗೆ 80 ಸಾವಿರ ರೂ. ವೆಚ್ಚ ಮಾಡಿ ಈರುಳ್ಳಿ ಬೆಳೆಯುತ್ತಾರೆ. ಇಲ್ಲಿನ ರೈತರು ವೆಚ್ಚ ಮಾಡಿದ ಹಣವೇ ಅಂದಾಜು 3 ಕೋಟಿ ರೂ. ಆಗಲಿದೆ. ಸತತ ಮಳೆ ಆಗದೇ ಇದ್ದಲ್ಲಿ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಫಸಲು ಬರುತ್ತಿತ್ತು. ಆದರೆ, ಮಳೆಯಿಂದ ಬೆಳೆ ನಾಶವಾಗಿ ಇಳುವರಿ ಕಡಿಮೆ ಬಂದಿದೆ. ಕೆ.ಜಿಗೆ 100 ರೂ ಏರಿಕೆಯಾಗಿದೆ. ರೈತರಿಗೆ ಬೆಳೆ ನಾಶವಾಗಿದ್ದರಿಂದ ಕಣ್ಣೀರು ಬರುತ್ತಿದ್ದರೆ, ಈರುಳ್ಳಿ ದರ ಗಗನಕ್ಕೆ ಏರುತ್ತಿರುವುದರಿಂದ ಗ್ರಾಹಕರಿಗೆ ಕಣ್ಣೀರು ಬರುವಂತಾಗಿದೆ.