ಬಾಗಲಕೋಟೆ: ಸರ್ಕಾರದ ಹತ್ತು ಹಲವು ಮಹತ್ವದ ಯೋಜನೆಗಳ ಅರಿವನ್ನು ಬೀದಿನಾಟಕ, ಜಾನಪದ ಸಂಗೀತ ಹಾಗೂ ವಿಚಾರ ಸಂಕಿರಣದ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ವಾರ್ತಾ ಇಲಾಖೆಯಿಂದ ತಾಲೂಕಿನ ನೀಲಾ ನಗರದಲ್ಲಿ ಗುರುವಾರ ಗ್ರಾಮ ವಾಸ್ತವ್ಯ ಮಾಡಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಲಾನಗರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡ ವಿನೂತನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಪಂ ಸದಸ್ಯ ರಂಗನಗೌಡ ಗೌಡರ ಚಾಲನೆ ನೀಡಿದರು. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು. ಅಲ್ಲದೇ ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಕರೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನೀಲಾನಗರದ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು ಮಾತನಾಡಿ, ಹಳ್ಳಿಯ ಸೊಗಡನ್ನು ಕಾಪಾಡಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡಬಾರದು ಎಂದರು. ಇಂದಿನ ಯುವ ಪೀಳಿಗೆ ದೇಶಿ ಸಂಸ್ಕೃತಿಯನ್ನು ರಕ್ಷಿಸಲು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಮುಕ್ಯೋಪಾಧ್ಯಾಯ ಎಂ ಬಿ ಪಲ್ಲೇದ, ಸಂಪನ್ಮೂಲ ವ್ಯಕ್ತಿಗಳಾದ ದೇಸಾಯಿ, ಲಮಾಣಿ ಸೇರಿ ಇತರರು ಉಪಸ್ಥಿತರಿದ್ದರು.