ಬಾಗಲಕೋಟೆ : ಸಾವಳಗಿ ತಾಲೂಕು ರಚನೆ ಬೇಡಿಕೆ ಹಿನ್ನೆಲೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಿರುವ ಗ್ರಾಮಸ್ಥರು ಪಂಚಾಯತಿ ಬಾಗಿಲಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಜಿಲ್ಲೆಯ ಜಮಖಂಡಿ ಉಪವಿಭಾಗದ 89 ಗ್ರಾಮ ಪಂಚಾಯತಿಗಳ ಮೊದಲ ಹಂತದ ಚುನಾವಣೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ. ಅದ್ರೆ ಸಾವಳಗಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ನೂತನ ತಾಲೂಕು ರಚನೆಗೆ ಆಗ್ರಹಿಸಿರುವ ಸಾವಳಗಿ ಜನರು, ಯಾರಿಗೂ ನಾಮಪತ್ರ ಸಲ್ಲಿಸೋಕೆ ಅವಕಾಶ ಇಲ್ಲದಂತೆ ಪಂಚಾಯತಿ ಬಾಗಿಲಲ್ಲೇ ಕುಳಿತು ಪ್ರತಿಭಟಿಸುತಿದ್ದಾರೆ. ಅಲ್ಲದೆ ಸಾವಳಗಿ ತಾಲೂಕು ರಚನೆ ಮಾಡುವವರೆಗೂ ಮುಂಬರುವ ಎಲ್ಲಾ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿ. 11 ಕೊನೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆ ಡಿ. 12ರಂದು ನಡೆಯಲಿದೆ. ನಾಮಪತ್ರ ಹಿಂಪಡೆಯಲು ಡಿ. 14 ಕೊನೆ ದಿನವಾಗಿದೆ. ಮತದಾನ ಡಿ. 22ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದ್ದು, ಮತ ಎಣಿಕೆ ಡಿ. 30ರಂದು ಬೆಳಗ್ಗೆ 8 ರಿಂದ ನಡೆಯಲಿದೆ.
ಓದಿ-ಸಾವಳಗಿ ಗ್ರಾಮವನ್ನು ತಾಲೂಕು ಕೇಂದ್ರವಾಗಿಸದಿದ್ದರೆ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ಜಮಖಂಡಿ ತಾಲೂಕಿನಲ್ಲಿ ಒಟ್ಟು 26 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.