ಬಾಗಲಕೋಟೆ : ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರಿದ್ದು, ರಾಜಕೀಯ ಪಕ್ಷಗಳು ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ಭರ್ಜರಿ ತಯಾರಿ ನಡೆಸುತ್ತಿವೆ. ಇದರ ಬೆನ್ನಲ್ಲೇ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿಗೆ ಆಗಮಿಸಿದ್ದು, ಎರಡು ದಿನ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದ್ದಾರೆ.
ಗುಳೇದಗುಡ್ಡ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಜೆಡಿಎಸ್ ಬಲವಿದೆ. ಆದರಿಂದ ಇಂದು ಬಾದಾಮಿ ಕ್ಷೇತ್ರದ ಗುಳೇದಗುಡ್ಡ ಪಟ್ಟಣದ ಕರಿನಂದಿ ರಂಗಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗ್ರಾ.ಪಂ. ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ, ಅದು ಪ್ರಜಾಪ್ರಭುತ್ವದ ರೀತಿಯಲ್ಲಿ ರಚನೆಯಾದ ಪಾರ್ಟಿಯಲ್ಲ. ಅಲ್ಲಿ ಪ್ರಶ್ನೆ ಮಾಡಂಗಿಲ್ಲ. ಮಾಡಿದರೆ ಉಳಿಗಾಲವಿಲ್ಲ. ನನ್ನನ್ನೇ ಪಕ್ಷದಿಂದ ಹೊರಹಾಕಿದರು ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ : ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾಗೆ ಕೊರೊನಾ ಸೋಂಕು..!
ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ಪ್ರಧಾನಿ ಆಗಬೇಕು ಎಂಬ ಆಸೆಯಿಲ್ಲ. ಮೈಸೂರಿನಿಂದ ಬಂದ ತಮಗೆ ಬಾದಾಮಿ ಜನರು ಆಶ್ರಯ ನೀಡಿ ಆಶೀರ್ವಾದ ಮಾಡಿದ್ದಾರೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುವೆ. ಈಗ ನಾನು ಉತ್ತರ ಕರ್ನಾಟಕದವನು. ನಾವು-ನೀವು ಎಲ್ಲರೂ ಒಂದೇ. ಹೀಗಾಗಿ ಕ್ಷೇತ್ರದಲ್ಲಿ ಎಲ್ಲಾ ಪಂಚಾಯತ್ಗಳನ್ನು ಗೆಲ್ಲಬೇಕು. ಗ್ರಾ.ಪಂ. ಗೆದ್ದರೆ ತಾ.ಪಂ, ಜಿ.ಪಂ, ವಿಧಾನಸಭಾ, ಲೋಕಸಭಾ ಹೀಗೆ ಎಲ್ಲಾ ಚುನಾವಣೆ ಗೆಲ್ಲಲು ಬುನಾದಿ ಆಗುತ್ತೆ. ಹೀಗಾಗಿ ಈ ಚುನಾವಣೆ ಬಹಳ ಪ್ರಾಮುಖ್ಯ ಹೊಂದಿದೆ. ಕಾಂಗ್ರೆಸ್ ಬೆಂಬಲಿಗರನ್ನು ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಸಚಿವರಾದ ಹೆಚ್.ವೈ. ಮೇಟಿ, ಆರ್.ಬಿ.ತಿಮ್ಮಾಪುರ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಜಿ.ಪಂ. ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸೇರಿ ಹಲವು ಮುಖಂಡರು ಚುನಾವಣಾ ಭಾಷಣ ಮಾಡಿ ಕಾರ್ಯಕರ್ತರನ್ನು ಗೆಲ್ಲಿಸುವಂತೆ ಕರೆ ನೀಡಿದರು.