ಬಾಗಲಕೋಟೆ: ಗ್ರಾಮ ಪಂಚಾಯಿತಿ ಚುನಾವಣೆಗೆ ಪದವೀಧರರು ಸ್ಪರ್ಧಿಸುವುದು ವಿರಳ. ಇದೀಗ ಗ್ರಾಮ ಪಂಚಾಯಿತಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಒಂದಿಲ್ಲ ಒಂದು ವಿಶೇಷತೆಗಳು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುತ್ತಿವೆ.
ಹೌದು, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸ್ವರಾಜ್ಯದ ಕನಸು ಕಂಡು ಸುಂದರ ಹಾಗೂ ಸ್ವಚ್ಛ ಗ್ರಾಮಕ್ಕಾಗಿ ಸ್ನಾತಕೋತ್ತರ ಪದವೀಧರ ದಂಪತಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಆಸಂಗಿ ಗ್ರಾಮ ಪಂಚಾಯಿತಿ ಆಸಂಗಿ, ಅಸ್ಕಿ, ಮದನಮಟ್ಟಿ ಗ್ರಾಮಗಳನ್ನು ಒಳಗೊಂಡಿದೆ. ಒಟ್ಟು 22 ಸ್ಥಾನಗಳ ಪೈಕಿ ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ 3ನೇ ವಾರ್ಡ್ನಿಂದ ಸಾಗರಿಕಾ ಮಹಾದೇವ ಗಾಯಕವಾಡ ಸ್ಪರ್ಧಿಸಿದ್ದರೆ, 4ನೇ ವಾರ್ಡ್ನಿಂದ ಮಹಾದೇವ ಗಜಾನನ ಗಾಯಕವಾಡ ಸ್ಫರ್ಧಿಸಿದ್ದಾರೆ. ಈ ಎರಡು ಕ್ಷೇತ್ರಗಳು ಸದ್ಯ ತೀವ್ರ ಕುತೂಹಲ ಕೆರಳಿಸಿವೆ.
ಓದಿ: ಬಾಗಲಕೋಟೆ ಗ್ರಾ.ಪಂ ಚುನಾವಣೆ: ಅಂತಿಮ ಕಣದಲ್ಲಿ 3,382 ಅಭ್ಯರ್ಥಿಗಳು
ಈ ದಂಪತಿ ಸ್ನಾತಕೋತ್ತರ ಪದವೀಧರರು. ಅದರಲ್ಲಿ ಮಹಾದೇವ ಎಂಕಾಂ ಹಾಗೂ ಎಂಎ ಮಾಡಿದ್ದರೆ, ಸಾಗರಿಕಾ ಎಂಎ ಪದವೀಧರೆ. ತಮ್ಮ ಗ್ರಾಮಕ್ಕೆ ಏನಾದರೂ ಒಂದು ಹೊಸ ಕೊಡುಗೆ ನೀಡಬೇಕು. ಕಲಿತಂತಹ ನಿರುದ್ಯೋಗಿ ಯುವಕರಿಗೆ ಹೆಚ್ಚು ಹೆಚ್ಚು ಗುಡಿ ಕೈಗಾರಿಕೆಗಳನ್ನು ನಿರ್ಮಿಸಲು ಪ್ರೋತ್ಸಾಹಿಸಿ ಗ್ರಾಮದಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಸ್ವಚ್ಛಗ್ರಾಮ ಹಾಗೂ ಸುಂದರ ಗ್ರಾಮದ ಪರಿಕಲ್ಪನೆಯ ಕನಸನ್ನು ಹೊತ್ತಿದ್ದಾರೆ.
ನನ್ನ ಕನಸಿನ ಗ್ರಾಮ ಪಂಚಾಯಿತಿ ಆಸೆ ಇದೆ. ನನ್ನ ಗ್ರಾಮ ಹಸಿರು ಗ್ರಾಮ ಪಂಚಾಯಿತಿ ಆಗಬೇಕು. ಉತ್ತಮವಾದ ರಸ್ತೆಗಳು, ಚರಂಡಿಗಳ ನಿರ್ಮಾಣಕ್ಕೆ ಪೂರ್ಣ ಪ್ರಯತ್ನ ಮಾಡುತ್ತೇವೆ. ನಾವು ಆಶ್ವಾಸನೆ ನೀಡುವುದಿಲ್ಲ, ವಾಗ್ದಾನ ಮಾಡುತ್ತೇವೆ. ವಾಗ್ದಾನದಂತೆ ಕೆಲಸ ಮಾಡುತ್ತೇವೆ ಎಂದು ಮಹಾದೇವ ಗಾಯಕವಾಡ ತಿಳಿಸಿದ್ದಾರೆ.