ಬಾಗಲಕೋಟೆ: ಕೂಲಿ ಕಾರ್ಮಿಕರೊಂದಿಗೆ ತಾವು ಸಹ ಕೆಲಸದಲ್ಲಿ ಸಾಥ್ ನೀಡುವ ಮೂಲಕ ಜಿಲ್ಲಾ ಪಂಚಾಯಿತಿ ಸಿಇಒ ಗಂಗೂಬಾಯಿ ಮಾನಕರ ಕಾರ್ಮಿಕರಿಗೆ ಪ್ರೇರಣೆ ನೀಡಿದರು.
ಜಿಲ್ಲಾ ಪಂಚಾಯತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಉದ್ಯೋಗ ಖಾತರಿ ಯೋಜನೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಹುನಗುಂದ ತಾಲೂಕಿನ ಮುಗುನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಜಮೀನಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಪಿಆರ್ಇಡಿ ವತಿಯಿಂದ ನಿರ್ಮಿಸಲಾಗುತ್ತಿರುವ ಚೆಕ್ ಡ್ಯಾಂ ಕಾಮಗಾರಿ ವೀಕ್ಷಣೆಗೆಂದು ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಃ ಜಿಪಂ ಸಿಇಒ ಮಾನಕರ ಕಾರ್ಮಿಕರೊಂದಿಗೆ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಕೊಂಡು ಟ್ರ್ಯಾಕ್ಟರ್ಗಳಲ್ಲಿ ಹಾಕುವ ಮೂಲಕ ಕಾರ್ಮಿಕರಿಗೆ ಸಾಥ್ ನೀಡಿದರು.
ಮುಗನೂರು ವ್ಯಾಪ್ತಿಯ ಬಸರಿಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಶಾಲೆಗಳಿಗೆ ತೆರಳಿ ಶೌಚಾಲಯಗಳನ್ನು ವೀಕ್ಷಿಸಿದರು. ನಂತರ ವಿವಿಧ ತರಗತಿಗಳ ಕೊಠಡಿಗಳಿಗೆ ತೆರಳಿ ಮಕ್ಕಳ ಕಲಿಕಾ ಮಟ್ಟವನ್ನು ಪರಿಶೀಲಿಸಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಕೇಳಿದರು. ನಂತರ ಬಸರಿಕಟ್ಟಿಯಿಂದ ಹೊರಟಾಗ ಹಾದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ನಡುತೋಪುಗಳನ್ನು ವೀಕ್ಷಿಸಿದರು.
ರಕ್ಕಸಗಿ ಗ್ರಾಪಂ ವ್ಯಾಪ್ತಿಯ ಹೊನ್ನರಹಳ್ಳಿ ಗ್ರಾಮಕ್ಕೆ ತೆರಳಿದ ಮಾನಕರ ಸ್ವ-ಸಹಾಯ ಗುಂಪುಗಳಿಗೆ ನಿರ್ಮಿಸಲಾದ ವರ್ಕ್ ಶೆಡ್ ವೀಕ್ಷಿಸಿದರು. ವರ್ಕ್ ಶೆಡ್‍ನಲ್ಲಿರುವ ಸ್ವ-ಸಹಾಯ ಗುಂಪುಗಳಿಗೆ ಇರುವ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಅವರು ತಯಾರಿಸಿದ ಬ್ಯಾಗ್‍ಗಳನ್ನು ವೀಕ್ಷಿಸಿ, ವಿವಿಧ ಕೌಶಲ್ಯ ತರಬೇತಿ, ಸಾಲ ಸೌಲಭ್ಯ, ಆರ್ಥಿಕ ಸಹಾಯಧನ, ತಿಂಡಿ ತಿನಿಸು ತಯಾರಿಸುವುದರಿಂದ ಉತ್ತಮ ಆದಾಯ ಪಡೆಯಬಹುದಾಗಿದೆ ಎಂದು ಸಿಇಒ ಮಾನಕರ ತಿಳಿಸಿದರು.