ಬಾಗಲಕೋಟೆ: ಜಿಲ್ಲೆಯ ಮುಧೋಳ ಅಭಿವೃದ್ಧಿ ವಿಷಯದಲ್ಲಿ ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ರಾಜಕೀಯಕ್ಕಾಗಿ ಚಿಲ್ಲರೆ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ತಿಮ್ಮಾಪುರಗೆ ಸರ್ಕಾರದ ನಿಯಮಗಳ ಜ್ಞಾನವೇ ಇಲ್ಲ. ಮುಧೋಳ ಪಟ್ಟಣದ ಬೈಪಾಸ್ ರಸ್ತೆ, ಕುಡಿಯುವ ನೀರಿನ ಯೋಜನೆ ಸೇರಿದಂತೆ ಇತರ ಅಭಿವೃದ್ಧಿಗಾಗಿ ನಮ್ಮ ಸರ್ಕಾರವಿದ್ದಾಗ 200 ಕೋಟಿ ನೀಡಲಾಗಿದೆ. ಆದರೆ ಇದು ತಮ್ಮ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ ಹಣ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ತಿಮ್ಮಾಪುರಗೆ ಸಾಮಾನ್ಯ ಜ್ಞಾನವೂ ಇಲ್ಲ. ಏಕೆಂದರೆ ಜನರಿಂದ ಆಯ್ಕೆಯಾದ ರಾಜ್ಯದ 224 ಶಾಸಕರು ಬಜೆಟ್ಗೆ ಒಪ್ಪಿಗೆ ನೀಡಿರುತ್ತಾರೆ. ಈ ಹಣ ಆಯಾ ಕ್ಷೇತ್ರದ ಶಾಸಕರಿಗೆ ಸಂಬಂಧಿಸಿದ್ದು. ಈ ಬಗ್ಗೆ ವಿಧಾನ ಪರಿಷತ್ ಸದಸ್ಯರಾಗಿರುವ ತಿಮ್ಮಾಪುರಗೆ ಮಾಹಿತಿ ಇಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಕ್ಯಾಬಿನೆಟ್ನಲ್ಲಿ ಕಾಮಗಾರಿ ಆದೇಶ ಮತ್ತು ಬಿಡುಗಡೆ ಆಗಿರುವ ಪತ್ರವನ್ನು ಬಹಿರಂಗಗೊಳಿಸುವಂತಿಲ್ಲ ಎಂಬ ಕಾನೂನು ಇದೆ. ಆದರೆ ಈ ವಿಷಯದ ಬಗ್ಗೆ ಮಾಹಿತಿ ಇಲ್ಲದ ಸಚಿವರು ಎಲ್ಲರಿಗೂ ಸರ್ಕಾರದ ಕಾಗದ ಪತ್ರ ನೀಡಿದ್ದಾರೆ. ಈ ಸಂಬಂಧ ಯಾರಾದರೂ ನ್ಯಾಯಾಲಯ ಮೊರೆ ಹೋದ್ರೆ ಅವರ ಮಂತ್ರಿ ಸ್ಥಾನ ಹೋಗುತ್ತದೆ ಎಂದರು. ಅಲ್ಲದೆ ಮುಧೋಳ ಮತಕ್ಷೇತ್ರದಲ್ಲಿ ಅಭಿವೃದ್ಧಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಸಚಿವ ತಿಮ್ಮಾಪುರಗೆ ಸವಾಲು ಹಾಕಿದರು.