ಬಾಗಲಕೋಟೆ : ಬಿಜೆಪಿಯಿಂದ ಒಬ್ಬ ಶಾಸಕರು ಸಹ ಕಾಂಗ್ರೆಸ್ಗೆ ಹೋಗುವುದಿಲ್ಲ. ಕಾಂಗ್ರೆಸ್ ಈಗ ಮುಳುಗುವ ಹಡಗು ಎಂದು ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ದೇಶದ 27 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಅಂತಹ ಪಕ್ಷಕ್ಕೆ ಯಾರೂ ಕೂಡ ಹೋಗುವುದಿಲ್ಲ. ಕಾಂಗ್ರೆಸ್ನವರು ಬರ್ತಾರೇ, ಬರ್ತಾರೇ ಅಂತಾ ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಪಕ್ಷದಲ್ಲಿ ವಲಸಿಗರು ಅನ್ನೋ ಭಾವನೆ ಇಲ್ಲ, ಎಲ್ಲರೂ ಬಿಜೆಪಿಗರೇ.. ಅವರು ವಲಸೆ ಬಂದಿದ್ದಾರೆ ಎನ್ನುವುದರಲ್ಲಿ ಅರ್ಥವಿಲ್ಲ. ಪಕ್ಷಕ್ಕೂ ಮತ್ತು ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟು ಬಂದು ಬಿಜೆಪಿ ಸದಸ್ಯರಾಗಿದ್ದಾರೆ. ಅವರು ಬಿಜೆಪಿ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನಮ್ಮ ಜೀವ ಇರೋವರೆಗೂ ಇಲ್ಲೇ ಇರುತ್ತೇವೆ ಅಂತಾ ಅವರೇ ಹೇಳಿದ್ದಾರೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಏನೂ ಕೆಲಸವಾಗಿಲ್ಲವೆಂದ ಸಿದ್ದರಾಮಯ್ಯ ಹೇಳಿಕೆಗೆ ಕಾರಜೋಳ ತಿರುಗೇಟು ನೀಡಿ, ಸಿದ್ದರಾಮಯ್ಯ ಏನು ಮಾಡಿಲ್ಲವೆಂದು ಹೇಳಿ, ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಅನ್ನು ಹೀನಾಯವಾಗಿ ಸೋಲಿಸಿದರು. ಅದನ್ನ ಅವರು ಅರ್ಥಮಾಡಿಕೊಳ್ಳಬೇಕು. ನಾವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನ ಮಾಡುತ್ತಿದ್ದೇವೆ.
2013 ರಿಂದ 18ರವರೆಗೆ ಕೊರೊನಾ, ಪ್ರವಾಹ ಇರಲಿಲ್ಲ. ಆದ್ರೂ ಸಿದ್ದರಾಮಯ್ಯ ಕಾಲದಲ್ಲಿ ಅಭಿವೃದ್ಧಿ ಆಗಲಿಲ್ಲ ಅಂತಾ ಜನ ತಿರಸ್ಕಾರ ಮಾಡಿದ್ರು. ಮುಂದೆಯೂ ಆ ಪಕ್ಷವನ್ನು ತಿರಸ್ಕಾರ ಮಾಡುತ್ತಾರೆ ಎಂದು ಟಾಂಗ್ ನೀಡಿದರು.
ಬೆಳಗಾವಿ ಬಿಜೆಪಿ ಭಿನ್ನಾಭಿಪ್ರಾಯ ವಿಚಾರವಾಗಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಟೀ ಕುಡಿಯೋಕೆ ಕೂಡಿದ್ರು ಮೀಡಿಯಾದವರು ಭಿನ್ನಾಭಿಪ್ರಾಯ ಸ್ಫೋಟ ಅಂತಾ ತೋರಿಸುತ್ತಿರಿ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ