ಬಾಗಲಕೋಟೆ : ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಸಂಘಟನೆಯೊಂದು ಕೊರೊನಾ ಸೋಂಕಿತರು ಮೃತಪಟ್ಟರೆ, ಅವರ ಪದ್ಧತಿ ಅನುಸಾರ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದೆ.
ಜಮಖಂಡಿ ನಗರದ ಪ್ಯಾಪೂಲರ್ ಫ್ರಂಟ್ ಆಫ್ ಇಂಡಿಯಾದ ಪದಾಧಿಕಾರಿಗಳು ಆಯಾ ಧರ್ಮದ ವಿಧಿ ವಿಧಾನಗಳ ಅನುಸಾರ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಿ, ಪ್ರಶಂಸೆಗೆ ಪಾತ್ರವಾಗಿದೆ. ಕೊರೊನಾ ಭಯಕ್ಕೆ ಸ್ವಂತ ಸಂಬಂಧಿಕರು ಕೂಡ ಮೃತದೇಹದ ಹತ್ತಿರ ಸುಳಿಯಲು ಭಯಪಡುತ್ತಿರುವ ಸಮಯದಲ್ಲಿ, ಮೃತಪಟ್ಟವರ ಸಂಪ್ರದಾಯಕ್ಕೆ ತಕ್ಕಂತೆ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ಮೂಲಕ ಈ ಸಂಘಟನೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ.
ನಗರಸಭೆಯ ಪರವಾನಿಗೆ ಪಡೆದಿರುವ ಪಿಎಫ್‌ಐ ಕಾರ್ಯಕರ್ತರು, ಇದುವರೆಗೆ ಕೊರೊನಾ ಸೋಂಕಿತರ ಮೃತ ದೇಹ, ಸಾಮಾನ್ಯವಾಗಿ ಮೃತಪಟ್ಟವರು, ಅನಾಥ ಶವಗಳು ಸೇರಿ 8 ಕ್ಕಿಂತ ಹೆಚ್ಚು ಜನರ ಅಂತ್ಯಸಂಸ್ಕಾರ ಮಾಡಿದ್ದಾರೆ. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಪಿಪಿಇ ಕಿಟ್ ಸೇರಿದಂತೆ ಸುರಕ್ಷತೆಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ತಮ್ಮ ಸ್ವಂತ ಹಣದಿಂದಲೆ ತೆಗೆದುಕೊಂಡು ಅಂತಿಮ ವಿಧಿವಿಧಾನ ನೆರವೇರಿಸುತ್ತಿದ್ದಾರೆ.
ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆ, ಅನ್ಯಾಯದ ವಿರುದ್ಧ ಹೋರಾಟ, ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ, ಕಳೆದ ವರ್ಷ ನೆರೆ ಹಾವಳಿ ಉಂಟಾಗಿದ್ದ ಸಂದರ್ಭದಲ್ಲೂ ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದು ಮತ್ತು ಅವರಿಗೆ ಊಟದ ವ್ಯವಸ್ಥೆ, ಅವಶ್ಯಕ ವಸ್ತುಗಳನ್ನು ವಿತರಣೆ ಮಾಡಿದ್ದರು.