ಬಾಗಲಕೋಟೆ: ಜಿಲ್ಲಾ ಸಹಕಾರಿ ಬ್ಯಾಂಕಿನ ಚುನಾವಣೆ ಹಿನ್ನೆಲೆಯಲ್ಲಿ ಹುನಗುಂದ ಮತಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಅಭ್ಯರ್ಥಿಗಳ ಸೋಲಿನ ಭೀತಿಯಿಂದ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಚುನಾವಣೆ ಅಭ್ಯರ್ಥಿಯೂ ಆಗಿರುವ ವಿಜಯಾನಂದ ಕಾಶಪ್ಪನವರ ಆರೋಪಿಸಿದ್ದಾರೆ.
ಬಾಗಲಕೋಟೆ ನವನಗರದ ಪ್ರೆಸ್ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಡಿಸಿಸಿ ಬ್ಯಾಂಕಿನ ಸಿಇಓ ಹಾಗೂ ಗಟ್ಟಿಗನೂರು ಮತ್ತು ಸೂಳೆಬಾವಿ ಪ್ರಾಥಮಿಕ ಕೃಷಿ ಪತ್ತಿನ ವ್ಯವಸ್ಥಾಪಕರನ್ನು ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಹೈಕೋರ್ಟ್ನಲ್ಲಿ ದಾವೆ ಹೂಡಿದ ಕಾರಣ ಸರ್ಕಾರದ ಆದೇಶದ ಬಗ್ಗೆ ಛೀಮಾರಿ ಹಾಕಲಾಗಿದೆ ಎಂದು ಆರೋಪಿಸಿದರು.
ಸಹಕಾರಿ ಕಾನೂನು ಪ್ರಕಾರ, ನಿರ್ದೇಶಕ ಮಂಡಳಿಯ ಸಭೆಗೆ ತಹಶೀಲ್ದಾರ್, ಸಿಪಿಐ ಹಾಗೂ ಡಿವೈಎಸ್ಪಿ ಅಕ್ರಮ ಪ್ರವೇಶ ಮಾಡಿ, ಒತ್ತಾಯ ಪೂರ್ವಕವಾಗಿ ನಡಾವಳಿ ಬರೆಸಿದ್ದಾರೆ. ಹೀಗಾಗಿ ಈ ರೀತಿ ಅಕ್ರಮವಾಗಿ ಪ್ರವೇಶ ಮಾಡಿ, ಆಡಳಿತ ದುರುಪಯೋಗ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ವಿಜಯಾನಂದ ಕಾಶಪ್ಪನವರ ಆಗ್ರಹಿಸಿದ್ದಾರೆ.
ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಉಪ ಮುಖ್ಯಮಂತ್ರಿ ಕುಮ್ಮಕ್ಕಿನಿಂದ ಅಧಿಕಾರ ದುರುಪಯೋಗ ಪಡಿಸಿಕೊಳ್ಳಲಾಗ್ತಿದೆ ಎಂದು ಅವರು ದೂರಿದ್ದಾರೆ.