ಬಾಗಲಕೋಟೆ : ಬಿಜೆಪಿ ಪಕ್ಷದ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ತಾಕತ್ ಇದ್ದರೆ ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿ ನೋಡಲಿ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸವಾಲು ಹಾಕಿದ್ದಾರೆ.
ಅವರು ಇಳಕಲ್ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ಕರೆಯಿಸಿ ತಂದೆ, ಮಕ್ಕಳು ನನ್ನನ್ನು ಅವಾಚ್ಯ ಶಬ್ದದಿಂದ ನಿಂದನೆ ಮಾಡಿಸಿದ್ದಾರೆ. ನಿಮಗೆ ತಾಕತ್ತು ಇದ್ದರೆ ಮುಂದೆ ಬಂದು ನಿಂದಿಸಿ ನೋಡೋಣ ಎಂದರು.
ಹಿಜಾಬ್ ಹಾಕಿಕೊಳ್ಳುವ ವಿಷಯವಾಗಿ ಬಿಜೆಪಿ ಪಕ್ಷದವರು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮಹಿಳೆಯರು ತಲೆಗೆ ಸೆರುಗು ಹಾಕಿಕೊಂಡು ಗೌರವ ನೀಡುತ್ತಿದ್ದರು. ಅದೇ ರೀತಿಯಾಗಿ ಮುಸ್ಲಿಂ ಧರ್ಮದವರು ಹಿಜಾಬ್ ಎಂದು ಹಾಕಿಕೊಳ್ಳುತ್ತಾರೆ. ಇದರಲ್ಲಿ ತಪ್ಪೇನು ಇದೆ ಎಂದು ಪ್ರಶ್ನೆ ಮಾಡಿದರು.
ಕಾರ್ಯಕ್ರಮಕ್ಕೆ ಬಂದ ಮಹಿಳೆಯರನ್ನು ನೀವು ಎಷ್ಟು ವರ್ಷದಿಂದ ಸೀರೆಯ ಸೆರಗು ತಲೆಗೆ ಹಾಕಿಕೊಂಡು ಗೌರವ ಕೊಡುತ್ತಿದ್ದೀರಿ. ಇವರಿಗೆ ಸಂಪ್ರದಾಯ, ಪದ್ದತಿ ಇದೆಯೋ, ಇಲ್ಲವೋ ಎಂದು ಪ್ರಶ್ನೆ ಮಾಡುತ್ತಾ, ಹಿಜಾಬ್ ಹಾಕಿಕೊಳ್ಳುವ ಬಗ್ಗೆ ವಿವಾದ ಸೃಷ್ಟಿಸಿ ರಾಜಕೀಯ ಮಾಡುತ್ತಿದ್ದಾರೆ. ಅಲ್ಲದೇ, ಮುಂದೆ ಬಟ್ಟೆ ಇಲ್ಲದೆ ಸಂಚಾರ ಮಾಡಿ ಎಂದು ಬಿಜೆಪಿ ಪಕ್ಷದವರು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಸ್ವಾಮಿ ವಿವೇಕಾನಂದರ ಪುಸ್ತಕ ಓದಿ ಇತಿಹಾಸ ತಿಳಿದುಕೊಳ್ಳಿ
ಛತ್ರಪತ್ರಿ ಶಿವಾಜಿ ಮಹಾರಾಜರು ಎಲ್ಲರನ್ನೂ ಒಗ್ಗೂಡಿಸಿ, ಜಾತಿ-ಭೇದ ಇಲ್ಲದೆ ಆಡಳಿತ ಮಾಡಿದ್ದರು. ಇಂತಹ ಮಹಾರಾಜರ ಮೂಲಕವೂ ರಾಜಕೀಯ ಮಾಡುತ್ತಾರೆ. ಸ್ವಾಮಿ ವಿವೇಕಾನಂದರ ಪುಸ್ತಕ ಓದಿ ಇತಿಹಾಸ ತಿಳಿದುಕೊಳ್ಳಿ ಎಂದು ಬಿಜೆಪಿ ಪಕ್ಷದವರ ವಿರುದ್ಧ ತಿರುಗೇಟು ನೀಡಿದರು.
ಓದಿ: ತ್ಯಾಜ್ಯ ವಿಲೇವಾರಿಯಲ್ಲಿ ಬಹುದೊಡ್ಡ ಅವ್ಯವಸ್ಥೆ: ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಜಾರಿಯಾಗಿಲ್ಲ ಕ್ರಮ!