ಬಾಗಲಕೋಟೆ: ಕೋವಿಡ್-19ನಿಂದ ಜನರು ಭಯಭೀತರಾಗಿದ್ದು, ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದರಿಂದ ರೈತರಿಗೂ ಅನುಕೂಲ ಆಗಬೇಕು. ಲಾಕ್ಡೌನ್ನಿಂದ ತೊಂದರೆಗೆ ಒಳಗಾಗಿದವರಿಗೂ ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಆರ್.ಬಿ.ತಿಮ್ಮಾಪೂರ ರೈತರಿಂದ ನೇರವಾಗಿ ತರಕಾರಿ ಖರೀದಿ ಮಾಡಿ ಜನಸಾಮಾನ್ಯರಿಗೆ ವಿತರಣೆ ಮಾಡುತ್ತಿದ್ದಾರೆ.
ಮುಧೋಳ ಮತಕ್ಷೇತ್ರದ ವಿವಿಧ ರೈತರಿಂದ ಖರೀದಿ ಮಾಡಿ, ತರಕಾರಿ ಸಿಗದೆ ನಗರದಲ್ಲಿ ಅಲೆದಾಡುವ ಜನತೆಗೆ ವಿತರಣೆ ಮಾಡಿದರು. ಕಳೆದ ತಿಂಗಳ 22ರಿಂದ ದೇಶವೇ ಲಾಕ್ಡೌನ್ ಆಗಿದೆ. ಈ ಹಿನ್ನೆಲೆ ಸಾರ್ವಜನಿಕರು ಹೊರಗೆ ಬರದೆ ಮನೆಯಲ್ಲಿ ಇರುವ ಪರಿಸ್ಥಿತಿ ಎದುರಾಗಿದೆ. ಮತ್ತೆ ಮೇ 3ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಆರೋಗ್ಯ ದೃಷ್ಟಿಯಿಂದ ಲಾಕ್ಡೌನ್ಅನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವುದು ಒಳ್ಳೆಯದು ಎಂದು ತಿಮ್ಮಾಪೂರ ಹೇಳಿದರು.
ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಮಾರ್ಗದರ್ಶನದಂತೆ ಮುಧೋಳ ನಗರದಲ್ಲಿ 31 ವಾರ್ಡ್ಗಳ ಮನೆ ಮನೆಗೆ ತೆರಳಿ ಉಚಿತವಾಗಿ ತರಕಾರಿ ಹಂಚುವ ಸೇವೆಯನ್ನು ಪ್ರಾರಂಭಿಸಲಾಗಿದೆ ಎಂದರು.
ನಗರಸಭೆಯ ಸದಸ್ಯರು ಸೇರಿದಂತೆ ಆ ಭಾಗದ ಹಿರಿಯರು ಕಾರ್ಯಕರ್ತರು ಬೆಳಗ್ಗೆ ಮನೆ ಮನೆಗೆ ತೆರಳಿ ಪ್ರತಿ ದಿನವು 100 ಮನೆಗಳಿಗೆ ವಿವಿಧ ರೀತಿಯ ತರಕಾರಿಗಳನ್ನು ಹಂಚಿಕೆ ಮಾಡಲಾಗುತ್ತಿದೆ ಎಂದರು.