ಬಾಗಲಕೋಟೆ: ಕೃಷ್ಣ, ಘಟಪ್ರಭಾ, ಮಲಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವ ಕಾರಣ ಜಿಲ್ಲೆಯಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ.
ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲಸಂಗಮಕ್ಕೆ ಮತ್ತೆ ಜಲದಿಗ್ಬಂಧನ ಉಂಟಾಗಿದೆ. ಸಂಗಮನಾಥ ದೇವಾಲಯವನ್ನು ತ್ರಿವೇಣಿ ನದಿಗಳ ನೀರು ಆವರಿಸಿಕೊಂಡಿದೆ. ದೇವಾಲಯ ಆವರಣದೊಳಕ್ಕೆ ನುಗ್ಗಿ ಬರುತ್ತಿರುವ ನದಿ ನೀರನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಿಬ್ಬಂದಿ ಎರಡು ವಿದ್ಯುತ್ ಮೋಟಾರ್ ಬಳಸಿ ಹೊರಹಾಕುತ್ತಿದ್ದಾರೆ.
ಇನ್ನು ನದಿಯಲ್ಲಿ ನೀರು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಕಾರಣ ಯಾವುದೇ ಕ್ಷಣದಲ್ಲಾದ್ರೂ ಕೂಡಲಸಂಗಮನಾಥೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗುವ ಸಾಧ್ಯತೆಯಿದೆ. ದೇವಸ್ಥಾನಕ್ಕೆ ಭಕ್ತರ ಪ್ರವೇಶ ಬಂದ್ ಆಗಲಿದೆ. ಸದ್ಯ ಗರ್ಭಗುಡಿಗೂ ನೀರು ನುಗ್ಗುವ ಭೀತಿ ಹಿನ್ನಲೆಯಲ್ಲಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಈಗಾಗಲೇ ದೇವಸ್ಥಾನದ ಹುಂಡಿಯನ್ನು ಸುರಕ್ಷಿತ ಸ್ಥಳದಲ್ಲಿ ತೆಗೆದಿಟ್ಟಿದ್ದಾರೆ. ಜೊತೆಗೆ ದೇವಸ್ಥಾನದ ಸಲಕರಣೆಗಳನ್ನು ಸ್ಥಳಾಂತರಿಸಿದ್ದಾರೆ.
ಪ್ರವಾಹದಿಂದಾಗಿ ಹುನಗುಂದ ತಾಲೂಕಿನ ಕೂಡಲಸಂಗಮ ಗ್ರಾಮ, ಕಜಗಲ್, ಕೆಂಗಲ್, ಹೂವಿನಕೊಪ್ಪ, ವರಗೋಡದಿನ್ನಿ ಗ್ರಾಮಗಳು ಜಲಾವೃತವಾಗಿವೆ. ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲೂ ಕೂಡಲಸಂಗಮದ ಸಂಗಮನಾಥ ದೇವಸ್ಥಾನ ಜಲಾವೃತವಾಗಿತ್ತು.