ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಇಲ್ಲ. ಆದರೂ, ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೃಷ್ಣ, ಘಟಪ್ರಭಾ ನದಿಗಳಲ್ಲಿ ಪ್ರವಾಹ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಮಖಂಡಿ ಹಾಗೂ ಮುಧೋಳ ತಾಲೂಕಿನ ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿದೆ.
ಇದರ ಜತೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ನೀರು ಪಾಲಾಗಿದೆ. ಪ್ರಮುಖವಾಗಿ ಮುಧೋಳ, ಜಮಖಂಡಿ ತಾಲೂಕಿನಲ್ಲಿ ವಾಣಿಜ್ಯ ಬೆಳೆ ಕಬ್ಬು ಬೆಳೆಯಲಾಗುತ್ತದೆ. ಈಗ ಬರುವ ಹಂಗಾಮಿಗೆ ಕಬ್ಬು ಕಟಾವು ಮಾಡಿ ಕಾರ್ಖಾನೆ ಸಾಗಿಸಲು ಸಿದ್ದತೆಯಲ್ಲಿದ್ದ ರೈತರು ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ.
ಕೊರೊನಾ ತೊಂದರೆಗೆ ಒಳಗಾಗಿದ್ದ ರೈತರಿಗೆ ಪ್ರವಾಹ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಬ್ಬು, ಮೆಕ್ಕೆಜೋಳ ಹಾಗೂ ಅರಿಶಿಣ ಸೇರಿದಂತೆ ತೋಟಗಾರಿಕೆ ಬೆಳೆಗಾದ ದಾಳಿಂಬೆ, ಸೀಬೆ ಹಾಗೂ ಇತರ ಬೆಳೆಗಳು ನೀರು ಪಾಲಾಗಿವೆ. ಹಾನಿಯಾಗಿರುವ ಬೆಳೆಗಳಿಗೆ ಸರ್ಕಾರ ನೀಡುವ ಪರಿಹಾರಧನ ಅತಿ ಕಡಿಮೆ. ಅದಕ್ಕಾಗಿ ದಾಖಲಾತಿ ಕೊಟ್ಟು ಸುಸ್ತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರಿಗೆ ಪ್ರವಾಹ ಬಂದರೆ ಸಾಕಷ್ಟು ತೊಂದರೆ ಉಂಟಾಗುತ್ತದೆ.
ಕಣ್ಣಾರೆ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿಹೋಗುವುದನ್ನು ಕಂಡು ಮಮ್ಮಲ ಮರಗುತ್ತಿರುವ ರೈತರು ಸರ್ಕಾರ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.